Sunday, November 22, 2020

ಕುಂಟ ಮಾಸ್ತರ್

ಕುಂಟ ಮಾಸ್ತರ್:

ಅದು ೭೦ರ ದಶಕದ ರಾಯಚೂರಿನಲ್ಲಿ ಕಳೆದ ದಿನಗಳು.ನನಗಾಗ ೧೦ ವರ್ಷವಿರಬೇಕು. ಪ್ರಾಥಮಿಕ ವಿದ್ಯಾಭ್ಯಾಸದ ಕಾಲಘಟ್ಟ. ಆಗ, ರಾಯಚೂರಿನಲ್ಲಿ ಒಂದು ಅಲಿಖಿತ ನಿಯಮ ಇತ್ತು. ಹುಡುಗರು ಶ್ಯಾಣಾ ಆಗಬೇಕಂದರ, ಕುಂಟ-ಮಾಸ್ತರ ಕಡಿಂದ ಟ್ಯೂಷನ್ ಹೇಳ್ಸೋದು. ಮಾಸ್ಟರ್ ಹೆಸರು ನನಗ ನೆನಪಿಲ್ಲ. ಬಿಳಿ ಕುರ್ತಾ ಬಿಳಿ ಪೈಜಾಮಾದೊಂದಿಗೆ ಕೈಯಾಗ ಛತ್ರಿ ಹಿಡಕೊಂಡು ಕುಂಟುತ್ತ ಬರ್ತಾ ಇದ್ದ ಕಾರಣವೇ ಇರ್ಬೇಕು ಅವರನ್ನ ಕುಂಟ ಮಾಸ್ಟರ್ ಅಂತಾ ಕರಿಲಿಕ್ಕೆ. ಅವರು, ತಾಯಂದಿರಿಗೆ ಮೊದಲಾ ಹೇಳಿರೋರು, 'ಛಡಿ ಛಂ ಛಂ,,,,ವಿದ್ಯಾ ಘಂ ಘಂ,,,,,ನಾ  ಹೇಳಿದ ಪಾಠ ನಿಮ್ಮ ಹುಡುಗ ಸರಿಯಾಗಿ ಒಪ್ಸಲಿಲ್ಲ ಅಂದ್ರ ನಾಲ್ಕ ಬಿಗ್ಯವನಾ,,,,,ನಿಮಗ ಮಗನ ಮ್ಯಾಲೆ ಅಚ್ಛಾ ಇದ್ದರ ನನ್ನ ಕರಿ ಬ್ಯಾಡ್ರಿ'. ಅವರ ಹೊಡತಗಳನ್ನ ನೆನಸಿಗೊಂಡ್ರ ಇವತ್ತಿಗೂ ಮೈ ಜಂ ಅಂತದ. ಜಾಸ್ತಿ ಏಟ ಬಿದ್ದ ದಿನ ಅಮ್ಮಾ ರಮಿಸಿ ಶೆಂಗಾ-ಬೆಲ್ಲ ಕುಟ್ಟಿ ತಿನ್ಲಿಕ್ಕಿ ಕೊಟ್ಟು ತಲಿ ಮ್ಯಾಲೆ ಕೈ ಆಡಸ್ತ ಕಣ್ಣಾಗ ನೀರು ತಂದು ಕೊಂಡು 'ನೀ ಶ್ಯಾಣಾ ಆಗ್ಲಿ ಅಂತ ಹಿಂಗ ಮಾಡಿವಿ,,,,ಮಾಸ್ಟರ್ ಹೊಡಿಯೊ ಮುಂದ ನನಗೂ ಕರುಳು ಹಿಂಡಿದಂಗ್ಹಾಂಗ ಅಗ್ತದ' ಅಂತಾ ಅಮ್ಮ ಹೇಳಾಕಿ. ಆದ್ರೂ, ಮಾಸ್ಟರ್ ಕೊಟ್ಟ ಕಡುಬಿನಿಂದಾನೆ ನಾಲ್ಕ ಅಕ್ಷರ ತಲ್ಯಾಗ ಹೋಗಿ ಅನ್ನಕ್ಕ ಹತ್ತಿದ್ದು ಸುಳ್ಳಲ್ಲ. ಇವತ್ತಿಗೂ, 'ಅವರೇನ್ರಿ ಕುಂಟ ಮಾಸ್ಟರ್ ಹತ್ರ ಕಲ್ತಾರ,,,,ಶ್ಯಾಣಾ ಇರ್ಲಿಕ್ಕೆ ಬೇಕು ಅದರಾಗೇನು ಎರಡ್ನೆ ಮಾತಿಲ್ಲ' ಅನ್ನೋರು. ನನ್ಹಾಂಗ ಮಾಸ್ಟರ್ ಬಳಿ ಏಟ ತಿಂದು ಜೀವನದಾಗ ಮುಂದ ಬಂದವ್ರು ಸಾಕಷ್ಟು ಮಂದಿ ಅದಾರ. ಅವರಿಗೆಲ್ಲ ಕುಂಟ-ಮಾಸ್ತರ ಅಂದ್ರ ಭಾಳಾ ಅಭಿಮಾನ.

No comments:

Post a Comment