Sunday, November 22, 2020

ಒಂದೆ ಬಳ್ಳಿಯ ಹೂಗಳು

ಒಂದೆ ಬಳ್ಳಿಯ ಹೂಗಳು:-ಹೌದು, ನಾನೀಗ ಹೇಳ ಹೊರಟಿರುವುದು ಒಂದೆ ಬಳ್ಳಿಯ ಹೂಗಳು ಎಂಬ ಹಳೆಯ ಕನ್ನಡ ಚಲನ ಚಿತ್ರದ ಬಗ್ಗೆ ಖಂಡಿತ ಅಲ್ಲ. ಹೈದರಾಬಾದ್ ಕರ್ನಾಟಕ ವೆಂಬ ಬಳ್ಳಿಗೆ ಹಬ್ಬಿ ಕೊಂಡಿರುವ ರಾಯಚೂರು ಮತ್ತು ಕಲಬುರಗಿ ನಗರಗಳ ಅವಿನಾಭಾವ ಸಂಬಂಧದ ಬಗ್ಗೆ ಒಂದಷ್ಟು ಸಂಗತಿ ಹಂಚಿಕೊಳ್ಳುವ ಇರಾದೆ ನನ್ನದು. ಹಾಗೇ ನೋಡಿದರೆ, ಬೀದರ, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಾದರೂ, ಕಲಬುರಗಿ ಯ ಜೊತೆ ಬಳ್ಳಾರಿ, ಕೊಪ್ಪಳದ ನಂಟು ಅಷ್ಟಕಷ್ಟೆ. ಬೀದರ, ಯಾದಗಿರಿ ಪರವಾಗಿಲ್ಲ ಅನ್ನಬಹುದು. ಆಡಳಿತಾತ್ಮಕ ಕಾರಣದಿಂದಾಗಿ ಕಲಬುರಗಿ ಬೇಕೆ ಹೊರತು ಇನ್ನಿತರ ಕಾರಣಗಳಿಗಾಗಿ ಬಳ್ಳಾರಿ ಬೆಂಗಳೂರು ಮುಖ ಮಾಡಿದರೆ, ಕೊಪ್ಪಳ ಹುಬ್ಬಳ್ಳಿಯತ್ತ ತನ್ನ ಚಿತ್ತ ಹರಿಸುತ್ತದೆ. ಆದರೆ, ರಾಯಚೂರು ಮತ್ತು ಕಲಬುರಗಿ ಭಾವನಾತ್ಮಕ ವಾಗಿ ಬಹಳ ಬಲವಾಗಿ ಬೆಸೆದುಕೊಂಡಿವೆ. ಸ್ವಲ್ಪ ಅಸಮಾಧಾನ ಇದ್ದರೂ, ಕಲಬುರಗಿಯ ಅಭಿವೃದ್ಧಿ ಯ ಪಥಕ್ಕೆ ರಾಯಚೂರಿನದ್ದು ತಕರಾರಿಲ್ಲದ ಮೌನ ಅಂಗಿಕಾರ. ಇವೆರಡು ನಗರ ಮಧ್ಯೆ ಪ್ರಯಾಣಿಕರ ಸಾಂದ್ರತೆ ಎಷ್ಟಿದೆಯೆಂದರೆ, DEMU ರೈಲು ತುಂಬಿ ತುಳುಕುತ್ತಿರುತ್ತದೆ. ಇನ್ನೊಂದಯ DEMUನಷ್ಟು ಜನ ಇನ್ನಿತರ ರೈಲುಗಳ ಮುಖೇನ ತಲುಪುತ್ತಾರೆ. ನನಗಿನ್ನು ನೆನಪಿದೆ, ಕಲಬುರಗಿಯಲ್ಲಿ ಮಳೆ ಬಂದರೆ ರಾಯಚೂರಿನಲ್ಲಿ ಕೊಡೆ ಹಿಡಿಯುವಷ್ಟರ ಮಟ್ಟಿಗೆ ಬೆಸೆತ ಇವುಗಳದ್ದು ಎಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನೂರಾರು ನೌಕರರು ಎರಡು ಕಡೆಯಿಂದ ಓಡಾಡುವ ದೃಶ್ಯ ಸಾಮಾನ್ಯ. ರಾಯಚೂರಿನಿಂದ ಕಲಬುರಗಿ ಗೆ ಬರಲು ರೈಲುಗಳ ಸಮಯ ಅನುಕೂಲಕರ. ಆದರೆ, ಕಲಬುರಗಿಯಿಂದ ಬೆಳಗಿನ ಒಂದೆರಡು ರೈಲುಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲಾ ರೈಲುಗಳ ಸಮಯ ನಿತ್ಯ ಓಡಾಡುವವರಿಗೆ ಸ್ವಲ್ಪ ಕಷ್ಟ. ಈ ಹಿಂದೆ, ಕಲಬುರಗಿ ಗೆ ನೀರಿನ ಅಭಾವ ತಲೆದೂರಿದಾಗ, ಆಗಿನ ರೈಲು ಮಂತ್ರಿಗಳಾಗಿದ್ದ ಶ್ರೀ ಜಾಫರ್  ಷರೀಫ್ ರವರು ರೈಲಿನ ಮುಖಾಂತರ ತುಂಗಭದ್ರಾ ನದಿಯ ನೀರನ್ನು ಪೂರೈಸಿದ್ದನ್ನು ಅದು ಹೇಗೆ ಮರೆಯಲು ಸಾಧ್ಯ. ಇವೆರಡು ನಗರಗಳ ಮಧ್ಯೆ ಲೆಕ್ಕವಿಲ್ಲದಷ್ಟು ಮದುವೆ ಸಂಭಂಧಗಳು ಬೆಸೆದುಕೊಂಡಿವೆ. ಮಂತ್ರಾಲಯದ ಶ್ರೀ ರಾಘವೇಂದ್ರರ ದರ್ಶನಕ್ಕೆ ಇಲ್ಲಿನವರು ರಜಾ ದಿನಗಳಲ್ಲಿ ಅತ್ತ ದೌಡಾಯಿಸಿದರೆ, ಗಾಣಗಾಪೂರದ ಶ್ರೀ ದತ್ತಾತ್ರೇಯರ, ಶ್ರೀ ಶರಣ ಬಸವೇಶ್ವರರ, ಶ್ರೀ ಬಂದೆ ನವಾಜ್ ರ ದರ್ಶನಕ್ಕೆ ರಾಯಚೂರಿಗರ ಕಲಬುರಗಿ ಗೆ ದಾಂಗುಡಿಯನ್ನು ನಾವು ನೋಡ ಬಹುದು. ಒಟ್ಟಾರೆ, ಕಲಬುರಗಿ ಯನ್ನು ತನ್ನ ದೊಡ್ಡಣ್ಣ ಎಂದು ಪ್ರಾಂಜಲವಾಗಿ ಒಪ್ಪಿ ಕೊಂಡಿರುವ ರಾಯಚೂರು ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡಣ್ಣನನ್ನು ಮೀರಿಸಿದೆ. ರಾಜ್ಯಕ್ಕೇನೆ ವಿದ್ಯುತ್ ಪೂರೈದುವ ಥರ್ಮಲ್ ಉತ್ಪಾದನಾ ಘಟಕ ಸೇರಿಕೊಂಡಂತೆ ಹಲವಾರು ಕಾರ್ಖಾನೆಗಳು ಇಲ್ಲಿವೆ. ಇಷ್ಟರಲ್ಲಿಯೆ, BHEL ಕಾರ್ಖಾನೆ ಆರಂಭಗೊಳ್ಳಲಿದೆ. ಯಾವುದೇ ವಿರಸವಿಲ್ಲದೆ ಈ ಎರಡು ಅಣ್ತಮ್ಮಗಳು ಇರುತ್ತಿರುವುದು ಖುಷಿ ನೀಡುವ ಸಂಗತಿ.

No comments:

Post a Comment