Sunday, November 22, 2020

ಕೇಳಿರಿ ಸವ೯ ಮಾನ್ಯರೇ

ಕೇಳಿರಿ ಸರ್ವ ಮಾನ್ಯರೆ,,,,,


ಕೇಳಿರಿ ಸರ್ವ ಮಾನ್ಯರೆ,,,,ಈ ದಿನ ಅಮರ ಟಾಕೀಸ್ ನಲ್ಲಿ ಭಯಂಕರ ಮಾರಾಮಾರಿ ಕನ್ನಡ ಚಿತ್ರ ದೇವರ ಮಕ್ಕಳು,,,,ಹಿಂಗ ಭುಂಗಾ ಹಿಡಕೊಂಡು ಸಾರಿಕೋತ ಹೋಗೋದು ನಮ್ ಮದಗಲ್ನಲ್ಲಿ ಸದಾ ಕಾಣುವ ದೃಶ್ಯ. ಅದು ೧೯೭೦ ರ ಕಾಲ ಘಟ್ಟ ಇರ ಬೇಕು.ನಮ್ಮೂರಾಗ ಇದ್ದದ್ದ ಒಂದು  ಅಮರ ಟಾಕೀಸ. ಇಲ್ಲಿ ಹೆಂಗಸರಿಗೆ ಮಾತ್ರ ಬಾಲ್ಕನಿ. ಅಲ್ಲಿ ಕುರ್ಚಿ ಇದ್ವು ಅಂತಾ ತಿಳ್ಕೊಬ್ಯಾಡ್ರಿ. ಹಾಸಿದ ಜಮಖಾನದ ಮ್ಯಾಲೆ ಕುಂತು ಸಿನಿಮಾ ನೋಡ್ಬೇಕಾಗಿತ್ತು. ನಮ್ಮಮ್ಮ, 'ಸಂಜಿಮುಂದ ಸಿನಿಮಾಕ್ಕ ಹೋಗೂದದ ಅಂತ್ಹೇಳಿ ನಮ್ಮನ್ನ ಮಲಗಸ್ತಿದ್ಲು. ಮಕ್ಕಳಿಗೆ ಉಚಿತ ಪ್ರವೇಶದ ಕಾರಣ ನನ್ನನ್ನ ತಾನು ಭುಜದ ಮ್ಯಾಲೆ ಮಲಗ್ಸಿಸಿಕೊಂಡು, ನನ್ನ ತಮ್ಮನ್ನ ಗೆಳತಿಯ ಭುಜದ ಮ್ಯಾಲೆ ಹೊರ್ಸಿ ಆಗ್ಲೆ ಮಕ್ಳ ಉಚಿತ ಪ್ರವೇಶದ ವ್ಯಾಪ್ತಿಯನ್ನು ಮೀರಿದ ನಮ್ಮನ್ನು ಈ ತರಾ ಪ್ಲಾನ ಮಾಡಿ ಗಂಗವ್ವ ಅನ್ನೊ ಗೇಟ ಕೀಪರ್ ನ್ನು ಯಾಮಾರ್ಸಿ ಸಿನಿಮಾ ತೋರಸ್ತಿದ್ಳು. ಕೈವಾರ ಮಹಾತ್ಮೆ, ಸತಿ ಅರುಂಧತಿ, ಪ್ರತಿಧ್ವನಿ ಹೀಗೆ ಹಲವಾರು ಶನಿಮಾಗಳನ್ನ ಮಕ್ಕಳ ಕೋಟಾದಡಿ ನೋಡಿದ್ದೆ. ಈ ಆಟ ಭಾಳ ದಿವ್ಸ ನಡೀಲಿಲ್ಲ. ಮೊದಲಾ ತಾಳಿ ಮರದ್ಹಾಂಗ ಬೆಳವಣಿಗಿ ನಮ್ದು. ಅಮ್ಮನ ಭುಜವನ್ನು ನನ್ನ ಇನ್ನೊಬ್ಬ ತಮ್ಮ,ತಂಗಿ ಆಕ್ರಮಿಸಿದರು. ನಮಗ,,,,,ಮತ್ತೇನು ನಾಲ್ಕಾಣೆಯ ನೆಲಾನೇ ಗತಿ. ಅಲ್ಲಿ ನೆಲದ ಮ್ಯಾಲೆ ಮಕ್ಕೊಂಡು ಆಜು-ಬಾಜು ಇರೋ ಕಂಬಗಳಿಂದ ಪರದಿಗೆ ಅಡ್ಡ ಬರದಾಂಗ ಜಾಗ ಹುಡುಕೊತಿದ್ದೆ. ಅಲ್ಲಿ, ಫ್ಯಾನ್ ಚಾಲು ಇದ್ರ ಓಕೆ,,,,ಇಲ್ಲಂದ್ರ 'ಪಂಕಲೇ ನಿಮ್ಮವೌನ' ಅಂತಾ ಕೆಟ್ಟ ದನಿಲೇ ಕೂಗಿದ ಮ್ಯಾಲ ಆ ಪಂಕ ತಿರುಗುತ್ತಿತ್ತು. ಆಗೆಲ್ಲ, ಒಂದೆ projectorನ ದಿನಗಳು. ಪ್ರತಿ ಅರ್ಧ ತಾಸಿಗೊಮ್ಮೆ ರಸಭಂಗ ನಿಶ್ಚಿತ. ರೀಲ ಬದಲಿಸಿ ಚಾಲು ಮಾಡೂತನ ಮತ್ತಷ್ಟು ಸೀಟಿ, ಕೆಟ್ಟ ದನಿಲೇ ಒದರೂದು, ಬಯ್ಯೊದು ಇರ್ತತಿತ್ತು. ರಾಜ್ಕುಮಾರ್ ಖಳನಾಯನಿಗೆ ಫೈಟಿಂಗ ಸೀನ್  ನಲ್ಲಿ ಹೊಡೆಯುವಾಗ ಬರುತ್ತಿದ್ದ 'ಡಿಶುಂ' ಶಬ್ದಕ್ಕೆ ನಮ್ಮ ಮನ ಪುಳಕಿತವಾಗುತ್ತಿತ್ತು. ಆಗಾಗ 'ಭಪ್ಪರೆ,,,,ಶಹಾಬ್ಬಾಸ' ಎಂಬ ಉದ್ಗಾರಗಳು ಬೇರೆ. ಬಂಗಾರದ ಮನುಷ್ಯ ಚಿತ್ರದ ಕೊನೆ ದೃಶ್ಯದಲ್ಲಿ ಭಾರತಿಯವರು ಭಾವಿಗೆ ಬಿದ್ದ ನಂತರದ  ಚಟ್ಟ ಸಿದ್ಧತೆಯ ದೃಶ್ಯ ಬಂದಾಗ ಇಡೀ ಟಾಕೀಸ್ ನಲ್ಲಿ  ನೀರವ ಮೌನ.ಎಲ್ಲರೊಂದಿಗೆ ನಾನೂ ಭರಪೂರ ಅತ್ತಿದ್ದೆ. ಜನರೇಟರ್ ಇರದ ಕಾರಣ ಕರೆಂಟ ಹೋದ ಸಮಯದಲ್ಲಿ ಮನೆಗೆ ದೌಡಾಯಿಸಿ ನಮ್ಮ ಮುತ್ಯಾನ ಬಳಿ ಇಂಟರವಲ್ ನಲ್ಲಿ ಶೆಂಗಾ ತಿನ್ಲಿಕ್ಕೆ ರೊಕ್ಕ ವಸೂಲ್ಮಾಡತಿದ್ದೆ. ಕರೆಂಟ ಬಂದಾಕ್ಷಾಣ ಹೋ ಎಂದು ಅರಚುತ್ತ ಟಾಕೀಸನತ್ತ ಓಡುತ್ತಿದ್ದೆ. ಇಂಟರವಲ್ ನಲ್ಲಿ ಆಗೆಲ್ಲ, ತೋರಸ್ತಾ ಇರೋ ಸಿನೆಮಾದ ಕಥೆ, ಹಾಡುಗಳು ನಾಯಕ, ನಾಯಕಿರಿರುವ ಪುಸ್ತಕ ಮಾರುತ್ತಿದ್ರು. ತೋಗೋಳಕ್ಕ ನಮ್ಹತ್ರ ರೊಕ್ಕ ಇರ್ತಿದಿಲ್ಲ. ಆಸಿಬುರಕ ಕಣ್ಣಿನಿಂದ ನೋಡ್ತಿದ್ದ ನಮಗ ' ನೋಡಿ ಕೋಡು' ಅಂತಾ ಕೆಲವ್ರು ಉದಾರಿಗಳ್ತಾ ಇದ್ರು. ಆಗ ನಮಗ ಸ್ವರ್ಗಕ್ಕ ಮೂರ ಗೇಣು. ನಮಗ ರೊಕ್ಕ ಸಿಗ್ತಿದ್ದು ಬರೀ ಕನ್ನಡ ಸಿನಿಮಾಗಳಿಗೆ ಅದೂ ಎರಡ್ತಿಂಗಳಿಗೆ ಒಂದರ್ಹಂಗ. ಹಿಂದಿ ಸಿನಿಮಾಕ್ಕ,,,,,ನನ್ನ ದೋಸ್ತ್ ಸುರೇಶ ಶೆಟ್ಟಿನೆ sponsorಮಾಡ್ತಿದ್ದ. ನಮ್ಮಮ್ಮ ನಮ್ಮ ಜಾಸ್ತಿ ಸಿನಿಮಾ ನೋಡೋ ಚಪಲಕ್ಕ ಭಾಳ ಬ್ಯಾಸರಾ ಮಾಡ್ಕೊತಿದ್ಳು. ರಾತ್ರಿ ಊಟಕ್ಕ ಹಾಕೋವಾಗ ಎರಡು ಕಣ್ಣಿನಿಂದ ನೀರು ಸುರಿಸ್ತಾ 'ಅಲ್ಲಿ ನಿಮ್ಮಪ್ಪ ನಿಮ್ಸಲುವಾಗಿ ದುಡಿತಾನ,,,,ಇಲ್ಲಿ ನೀವು ಸಿನಿಮಾ ನೋಡ್ತಾ ಹಾಳಾಗ್ತೀರಿ,,,,,, ಅನ್ನಕ್ಕ ಯಾವಾಗ ಹತ್ತೊದು' ಅಂತಾ ಬೈತಿದ್ಳು. ಆ ಕ್ಷಣದಲ್ಲಿ, ತುಂಬಾ ಕಸಿವಿಸಿಯಾಗಿ ಇನ್ನೊಮ್ಮೆ ಸಿನಿಮಾಕ್ಕ ಹೋಗಾ ಬಾರ್ದು ಅನಸ್ತಿತ್ತು. ಆದರ, ಮತ್ತದೆ ಹಾಡು ಅದೇ  ರಾಗ. ನಮ್ಮಪ್ಪಂತು,,,,, ಮಕ್ಕಳ ಮ್ಯಾಲೆ ಘನ ಪ್ರೀತಿ ಆತಗ. ನನ್ಮಕ್ಳು ಧಡ್ಢ್ರಾಗುದಿಲ್ಲ ನೋಡ್ತಿರು' ಅಂದು ಅಮ್ಮನ ದೂರುಗಳೆಲ್ಲಾ ಒಂದಾ ಸಿಟಿಂಗ್ನಲ್ಲಿ ಡಿಸ್ಮಿಸ್ ಆಗ್ತಿದ್ವು. ಕಾಲ ಸರಿದಂತೆ ನಾವೆಲ್ಲ ಅಪ್ಪ ಹೇಳಿದಂತೆ ಶ್ಯಾಣಾರಾಗಿ ಅಮ್ಮನ ಹಾರೈಕೆಯಂತೆ ಅನ್ನಕ್ಕ ಹತ್ತಿವಿ. ಆದರ, ನಮ್ಮ ಅಭ್ಯುದಯನಾ ನೋಡಿ ಹಿರಿ ಹಿರಿ ಹಿಗ್ಗ ಬೇಕಿದ್ದ ಅಪ್ಪ ಅಮ್ಮಾ ಜಲ್ದೀನಾ ಶ್ರೀಹರಿ ಪಾದಾ ಸೇರ್ಕೊಂಡ್ರು. ಇತ್ತೀಚೆಗೆ ಮುದಗಲ್ ಗೆ ಹೋದಾಗ ದಂಗಾಗಿ ಹೋದೆ. ನನ್ನ ಪ್ರಿಯ ಅಮರ ಟಾಕೀಸ ನೆಲಸಮವಾಗಿ ಅಲ್ಲಿ ವಾಣಿಜ್ಯ ಸಂಕೀರ್ಣ ತಲೆ ಎತ್ತಿತ್ತು. ಮತ್ತಾ ಸಿನಿಮಾ ಹ್ಯಾಂಗೋ ಅಂದರ,,,,,ದೋಸ್ತ್ ಸುರೇಶ ಹೇಳ್ದ,,,,ಟಿವ್ಯಾಗೇನು ಸಿನಿಮಾಕ ಬರ ಬಂದದೇನು. ಅಷ್ಟಕ್ಕೂ ನೋಡ್ಬೇಕು ಅನ್ಸಿದ್ರ,,,,ಇಳಕಲ್, ಗಂಗಾವತಿ, ಲಿಂಗ್ಸೂರು, ರಾಯ್ಚೂರು ಗಳಿಗೆ ಹೋದಾಗ ನೋಡ್ತಿವಿ ಅಂದ.  ಅದರೂ, ಅಮರ ಟಾಕೀಸ್ ನಲ್ಲಿ ನೆಲದ ಮ್ಯಾಲ ಮಲ್ಕೊಂಡು ನೋಡಿದ ಮಜಾ ನಮ್ ಕಲಬುರಗಿ ಅಥ್ವಾ ಬೆಂಗಳೂರ್ನ ಯಾವ ಮಲ್ಟಿಪ್ಲೆಕ್ಸ್ ನ್ಯಾಗು ಬರಾಣಿಲ್ಲ.

No comments:

Post a Comment