'ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು, ಭೂ-
ಮಂಡಲಕ್ಕೆ ಪಾಂಡುರಂಗವಿಟ್ಠಲ ಪರದೈವವೆಂದು' ಹೀಗೆ ಪರವಶತೆಯ ಪರಾಕಾಷ್ಠೆಯಲ್ಲಿ ಭಜನೆ ಕಳೆಗಟ್ಟುತ್ತಿತ್ತು. ತಾಳ, ಖಂಜಿರ, ಡೊಲಕಗಳ ಲಯ ಬದ್ಧ ವಾದನ ಅಲೆ ಅಲೆಯಾಗಿ ಬಂದು ಕಿವಿಗೆ ಇಂಪಾಗಿ ಬಡಿಯುತ್ತಿತ್ತು. ಅಲ್ಲೊಬ್ಬರು ಭಜನೆಯ ತಾಳಕ್ಕನುಗುಣವಾಗಿ ತಕಧಿಮಿತ ಶುರುವಿಟ್ಟು ಕೊಂಡಿದ್ದರು. ಇಲ್ಲೊಂದು ಮಹಿಳಾ ಜೋಡಿ ಕೋಲಾಟ ಆರಂಭಿಸಿದ್ದರು. ಲಿಂಗ್ಸೂರಿನ ಶ್ರೀ ವರದೇಂದ್ರರ ಸನ್ನಿಧಾನ ಭಕ್ತಿಮಯವಾಗಿತ್ತು. ಈ ಯತಿಗಳು ಮಂತ್ರಾಲಯದ ಶ್ರೀ ರಾಘವೇಂದ್ರರ ಪೀಠಸ್ಥರು. ಮೂಲ ವೃಂದಾವನ ಪುಣೆಯಲ್ಲಿದ್ದು ಲಿಂಗ್ಸೂರಿನಲ್ಲಿರುವುದು ಸ್ವಪ್ನ ವೃಂದಾವನವಂತೆ. ನಮ್ಮ ಬಾಲ್ಯದಲ್ಲಿ, ವರದೇಂದ್ರರ ಆರಾಧನೆ, ಶ್ರೀ ಕುಪ್ಪೆರಾಯನ ಜಾತ್ರಿಗೆ ಹೋಗುದು ಅಘೋಷಿತ ನಿಯಮವಾಗಿತ್ತು. ನಮ್ತಾಯಿ ಸ್ವಾದರ್ಮಾವಾ ಹನುಮಣ್ಣ ಮತ್ತು ಶಾಂತಕ್ಕ ದಂಪತಿಗಳು ಬಂದವರನ್ನ ಗಂಡು ಬೀಗರಿಗೆ ಉಪಚರಿಸಿದ ಹಾಗೆ ನೋಡಿಕೊಳ್ಳ್ತಿದ್ರು. ನಾನು ಬಹಳ ಕರ್ಕಷ ಧ್ವನಿಯಲ್ಲಿ ಅಳುತ್ತಿದ್ದೆನಂತೆ. ಊರ ಮುಂದಿನ ಅಗಸಿ ಬಳಿಯ ನನ್ನ ಅಳು ಕೇಳಿಯೇ ಸೀತಕ್ಕ ಬಂದ್ಲು ಎಂದು ಗುರ್ತ ಹಿಡಿತ್ತಿದ್ದರಂತೆ. ಹತ್ತಿರದ, ದೂರದ ಬಳಗವೆಲ್ಲ ಅವರ ಮನೆಯಲ್ಲಿ ಬೀಡು ಬಿಡುತಿತ್ತು. ಸಾಕಷ್ಟು ಜನರ ಆಗಮನ ಖರ್ಚಿಗೆ ದಾರಿಯಾಗುತ್ತಿತ್ತು. ಮೂರ್ನಾಲ್ಕು ದಿನ ಎಲ್ಲರನ್ನು ನೋಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ, ಈ ದಂಪತಿಗಳು ಎಲ್ಲವನ್ನ ಲೀಲಾಜಾಲವಾಗಿ ನಿಭಾಯಿಸುತ್ತಿದ್ದರು. ಮೊದಲೆ ತುಂಬಿದ ಸಂಸಾರ ಜೊತೆಗೆ ನಮ್ಮೆಲ್ಲರನ್ನು ನೋಡಿ ಕೊಳ್ಳುವುವ ಜವಾಬ್ದಾರಿ ಮಮತಾಮಯೀ ಶಾಂತಕ್ಕದು. ಅವರಂತಹ ಅಃತಕರಣ ಭರಿತ ಜೀವ ಈಗಿನ ಕಾಲಘಟ್ಟದಲ್ಲಿ ಸಿಗುವುದು ದುರ್ಲಭ. ಅವರ ಹಿರಿಯ ಮಗ ಮದ್ದಪ್ಪ ಬೆಳಗ್ಗೆ ೭ ಕ್ಕೆ ಶುರು ಮಾಡಿದ್ರೆ ಎಲ್ಲರಿಗೆ ಚಹಾ ಮುಟ್ಟಿಸುವಲ್ಲಿ ೯ ಬಡಿಯುತ್ತಿತ್ತು. ಆಗ ಗ್ಯಾಸ ಸಹ ಇರ್ಲಿಲ್ಲ. ಚಿಮಣಿ ಎಣ್ಣಿ ಸ್ಟೋವ್ ನ್ನ ಹವಾ ಹೊಡ್ದು ಹೊಡ್ದು ಚಾಲು ಮಾಡ್ತಿದಿದ್ರು. ಯಥಾ ಪ್ರಕಾರ ನಮ್ಕಡಿಂದ ಅಪ್ಪ, ಅಮ್ಮಾ, ನಾವ್ ಐದ್ ಮಂದಿ ಮಕ್ಳು ಹಾಗೂ ನಮ್ ಮುತ್ಯಾ(ತಾತಾ)ಹಾಜರ. ಆರಾಧನೆಯ ಹಿಂದಿನ ದಿನದ ಪಲ್ಲಕ್ಕಿ ಸೇವೆ, ತಾರತಮ್ಯ ಭಜನೆ ತಡ ರಾತ್ರಿಯವರೆಗೂ ಸಾಗುತ್ತಿತ್ತು. ನನ್ನಮ್ಮ, ನನ್ನ ನಿದ್ದೆ ಭರಿತ ಕಣ್ಣು ನೋಡಿ ತನ್ನ ಮಡಿಲಲ್ಲಿ ಮಲಗಲು ಅನುವುಮಾಡಿ ಕೊಡುತ್ತಿದ್ದಳು(ಇದನ್ನು ಲೆಕ್ಕಣಿಸುವಾಗ ಕಂಗಳು ಮಂಜಾಗಿವೆ). ಆಕೆಯ ನಡು ಹಿಡಿದುಕೊಂಡೆ ಅರ್ಧ ನಿದ್ರೆ, ಅರ್ಧ ಸುಪ್ತಾವಸ್ಥೆಯಲ್ಲಿಯೇ ಗೂಡು ಸೇರಿ ನಿದ್ದೆಗೆ ಶರಣಾಗುತ್ತಿದ್ದೆ. ನಮ್ಮನ್ನು ಬಿಟ್ಟು ಅಪ್ಪಾ ಹೊರಟು ಬಿಡುತ್ತಿದ್ದರು. ಮತ್ತೆ ಕರೆಯಲು ಬರುತ್ತಿದ್ದರು. ಸೀತಿ ಮಕ್ಳು ಬಲು ಉಲಕೋಚಿ ಎಂಬ ವಿಶೇಷಣ ನಮಗಿತ್ತು. ಅಮ್ಮನದ್ದು ಎಲ್ಲದಕ್ಕೂ ಮುಗುಳು ನಗೆಯ ಪ್ರತಿಕ್ರಿಯೆ. ಮಾರನೆ ದಿನ ಮಧ್ಯಾರಾಧನೆ. ಭಜನೆ, ತೇರಿನ ನಂತರ ಅಲಂಕಾರ ಕ್ಕೆ ಕೂತ ಆಚಾರ್ಯ ರ ಭೋಜನ. ಸುಮಾರು ಐವರು ಆಚಾರ್ಯರು ಅಲಂಕಾರ ದ ಭೋಜನಕ್ಕೆ ಕುಳಿತಿರುತ್ತಿದ್ದರು. ಅದು ತುಂಬಾ ಖರ್ಚಿನ ಬಾಬತ್ತು. ಪಂಚ ಭಕ್ಷ್ಯ ಪರಮಾನ್ನಗಳೆ ಅಲ್ಲಿರುತ್ತಿತ್ತು. ನನಗೆ ಪ್ರೀಯವಾದ ಬೆಸನ್ ಉಂಡಿ ಆಚಾರ್ಯ ರ ಉದರಕ್ಕಿಳಿಯುವುದನ್ನು ಆಸೆ ಕಣ್ಣುಗಳಿಂದ ನೋಡುತ್ತಿದ್ದೆ. ದೊಡ್ಡವನಾದ ಮೇಲೆ ಅಲಂಕಾರ ಬ್ರಾಹ್ಮಣನಾಗುತ್ತೇನೆ ಎಂದು ಹೇಳಿ ಅಮ್ಮನಿಂದ ಧಡ್ಢ ಅಂದ್ರ ನೀನ,,,,,ಅಂತಾ ಬೈಸಿಕೊಂಡಿದ್ದೆ. ಅಲಂಕಾರದ ಖರ್ಚನ್ನು ಪ್ರತಿ ವರ್ಷ ಒಂದು ಜೋಡಿ ವಹಿಸಿಕೊಳ್ಳುವುದಾಗಿ ಮೊದಲೇ ತಿಳಿಸಿರುತ್ತಿತ್ತು. ಸಾಮೂಹಿಕ ಅನ್ನದ ಖರ್ಚನ್ನು ಪಟ್ಟಿ ಎತ್ತಿ ನಿರ್ವಹಿಸುತ್ತಿದ್ದರು. ಶ್ರೀ ಕುಪ್ಪೆರಾಯರ ಜಾತ್ರಿಯೊಳಗ ಮತ್ತssss ಎಲ್ಲರ ಜಮಾವಣಿ. ನಮ್ಮ ಮುತ್ಯಾ ತೇರ್ನಾಗ ಕೂತ ನಂತರ ತೇರ ಏಳಿತ್ತಿದ್ರು. ಉತ್ತತ್ತಿ, ಬಾಳಿ ಹಣ್ಣು ಗಳನ್ನ ನೆರೆದರು ಒಗಿತಿದ್ರು. ಅವನ್ನ ಹೀಡಿಯೋದ ಒಂದ ಖುಷಿ. ಈಗ, ಕಾಲ ಬದಲಾಗಿದೆ. ಎಲ್ಲಾ ಆಧುನೀಕರಣದ ಅಲೆಯಲ್ಲಿ ಕರಗ್ತಾ ಇದೆ. ಅಃತಕರಣದ ಜೀವಗಳು ಶ್ರೀ ಹರಿಯ ಪಾದ ಸೇರಿವೆ. ನನ್ತಮ್ಮ ಪ್ರಾಣೇಶ ಇಂದಿಗೂ ತಪ್ದೆ ಆರಾಧನೆ, ಜಾತ್ರಿಗೆ ಹೋಗ್ತಾನೆ. ಒಬ್ಬನಾದ್ರು ಆ ಕಕ್ಕಲುತೆಯ ಬಂಧ ಉಳ್ಸಿಕೊಂಡಿದ್ದಾನಲ್ಲ,,,,,ಅದೆ ಸಮಾಧಾನ ನನಗೆ.
No comments:
Post a Comment