Sunday, November 22, 2020

ಸೀತಕ್ಕ

ಸೀತಕ್ಕ


ಹಿರಿಯರಿಗೆ ಸೀತಿ,ಸಮಕಾಲೀನ ಗೆಳತಿಯರಿಗೆ ಸೀತಾ, ಕಿರಿಯರಿಗೆ ಸೀತಕ್ಕ ಎಂದೆ ಕರೆಸಿಕೊಳ್ಳುತ್ತಿದ್ದ ನನ್ನ ಜನನಿ ಸೀತಾಬಾಯಿಯ ಕತೆ ಇದು. ವೈದೀಕ ಬ್ರಾಹ್ಮಣ ಮನೆತನದಲ್ಲಿ ಜನ್ಮ ತಾಳಿದ ನಮ್ಮ ಅಮ್ಮ ಸ್ವಬಾವತಃ ಸಂಪ್ರದಾಯ ಕಟ್ಟುಪಾಡುಗಳಿಗೆ ಜೋತು ಬಿದ್ದೆ ಬೆಳೆದವರು. ಮುದಗಲ್ ನ ಭೀಮಭಟ್ಟ-ಪದ್ದಕ್ಕ ದಂಪತಿಗಳ ಎರಡನೆ ಮಗಳಾದ ನಮ್ಮ ಅಮ್ಮ ಓದಿದ್ದು ಎಂಟನೆ ತರಗತಿ ಮಾತ್ರ. ಆದರೆ, ಸದಾ ಓದುವ ಹವ್ಯಾಸ. ನನ್ನಲ್ಲಿ ಓದುವ ಗೀಳು ಬಂದಿದ್ದೆ ಅಮ್ಮನಿಂದ. ನನ್ನ ಬರವಣಿಗೆ ಗೆ ಅಪ್ಪನೆ ಕಾರಣ.  ಸಿಂಧನೂರಿನಲ್ಲಿ ಸರಕಾರಿ ಶಾಲಾ ಮಾಸ್ತರ್ ಹುದ್ದೆಯಲ್ಲಿದ್ದ ಮುದಗಲ್ ರಾಘವೇಂದ್ರ ರಾವ್ ಅವರೊಡನೆ ವಿವಾಹ. ಲಗ್ನಕ್ಕೂ ಮೊದಲು ನಮ್ಮ ಅಜ್ಜಿ(ತಂದೆಯ ತಾಯಿ)ಅವರ ಇದ್ದ ಒಂದೆ ೫ ಎಕರೆ ಹೊಲವನ್ನು ನಮ್ಮ ತಾತಾ ಭೀಮಭಟ್ಟರಿಗೆ ಏನೋ ತಾಪತ್ರಯದ ಕಾರಣ ಒತ್ತಿ ಇಟ್ಟಿದ್ದರು.  ನಮ್ಮ ತಾತಾ, ಅದೆ ಹೊಲವನ್ನು ವರೋಪಚಾರ ಎಂದು ನಮ್ಮ ತಂದೆಯವರಿಗೆ   ಮರಳಿಸಿದ್ದರು. ಈ ಹೊಲದ ಮೇಲೆ ನಮ್ಮ ತಂದೆಯವರಿಗೆ ಬಲು ಪ್ರೀತಿ.ಮುದಗಲ್ ಗೆ ಬಂದಾದಲೆಲ್ಲ ಅವರ ಮೊದಲ ಭೇಟಿ ಹೊಲಕ್ಕೆ. ಅಲ್ಲಿದ್ದ, ಚಂದ್ರ ಮಾವು, ಹೋಳಿಗೆ ಮಾವಿನ ಗಿಡಗಳ ನೆರಳಲ್ಲಿ ವಿರಮಿಸಿ ಬರುತ್ತಿದ್ದರು. ವಿಷಯ ಸೀತಕ್ಕನ್ನ ಬಿಟ್ಟು ಎಲ್ಲೊ ಹೋಗ್ತಾ ಇದೆ ಅಂತಾ  ಅನಸ್ತಿದಿಯಾ ವಾಚಕ ಮಹಾಶಯ.ನಮ್ಮ ತಂದೆ ರಾಘಪ್ಪನ ಉಲ್ಲೇಖವಿಲ್ಲದೆ ಸೀತಕ್ಕನ ಕಥೆ ಅಪೂರ್ಣವಾಗುತ್ತದೆ. ವಿಷಯಾಂತರ ಎಂದು ಖಂಡಿತ ಭಾವಿಸ ಬೇಡಿ. ಈ ಸೀತಕ್ಕ, ಮಮತೆ ಅಃತಕರಣಕ್ಕೆ ಇನ್ನೊಂದು ಹೆಸರು. ಮುದಗಲ್ ನಲ್ಲಿ ನಮ್ಮಮ್ಮ ಹಾಕುವ ಒಗಟುಗಳಿಗೆ ಭಾರಿ ಫರಮಾಯಿಷಿ. ಅದರಲ್ಲೂ, ದಶಾವತಾರದ ಕಥೆ ಹೇಳಿ ಗಂಡನ ಹೆಸರನ್ನು ಹೇಳುವ ಒಗಟಿಗೆ ಭಾರಿ ಬೇಡಿಕೆ ಇತ್ತು. ಮದುವೆ, ಮುಂಜಿಗಳಲ್ಲಿ ನಮ್ಮಮ್ಮ ಯಾವಾಗಲೂ ಮುಂದು.  ರುಕ್ಕೋತ,ಸುರಗಿ, ಲಡ್ಡಿಗಿ ಭೂಮ ಹೀಗೆ ಮದುವೆಯ ಎಲ್ಲ ವಿಧಿ ವಿಧಾನಗಳನ್ನು ಅತ್ಯಂತ ಕ್ಷಮತೆಯಿಂದ ಯಾವುದೇ ಲೋಪವಿಲ್ಲದೆ ನಮ್ಮಮ್ಮ ನಿರ್ವಹಿಸುತ್ತಿದ್ದರು. ಹಾಡು ಹಸೆಯಲ್ಲೂ ಅಮ್ಮನದ್ದು ಎತ್ತಿದ ಕೈ. ಸದಾ ಧುಮ್ಮಿಕ್ಕುವ ಧಾವಂತದ ಕಣ್ಣಿರು ತುಂಬಿದ ಬಟ್ಟಲು ಕಂಗಳು, ಮುಖಕ್ಕೆ ಢಾಳಾದ ಕುಂಕುಮ ಆಗಾಗ ಕಚ್ಚಿ ಹಾಕಿ ಉಟ್ಟಿರುತ್ತಿದ್ದ ಸೀರೆಯಿಂದ ಅಮ್ಮನಿಗೆ ದೈವಿ ಕಳೆ ಇರುತ್ತಿತ್ತು. ನಮಗೆ ಓದು-ಬರಹ ಕರಗತವಾಗುವಲ್ಲಿ ಅಮ್ಮನ ಹೊಡೆತಗಳೆ ಕಾರಣ. ಹೊಡೆತದ ನಂತರ ತಬ್ಬಿಕೊಂಡು ಸಂತೈಸಿ ಕೊಬ್ಬರಿ-ಬೆಲ್ಲ ಕೊಟ್ಟು ' ನೀವು ಅನ್ನಕ್ಕ ಹತ್ತಲಿ ಅಂತ ನಾ ಹೊಡಿತೀನಿ' ಎನ್ನವುದು ಅವರ ನಿಲುವು. ಅಪ್ಪ ನಿಂದ ಹೊಡೆತ,,,,ಸಾಧ್ಯವೆ ಇಲ್ಲ. ಅವರ ಒಲವು ಧುಮ್ಮಿಕ್ಕುವ ಜಲಪಾತದಂತೆ. ಬಾಯಲ್ಲಿ ತಂಬಾಕು ಹಾಕಿಕೊಂಡು ಆನಂದಲ್ಲಿರುವಾಗ  ನಮ್ಮ ಚಿಲ್ಲರೆ ಹಣದ ಅವಶ್ಯಕತೆ ಈಡೇರಿಕೊಳ್ಳುವ ಕಲೆ ನಮಗೂ ದತ್ತವಾಗಿತ್ತು.ಬೈಯಲು ಬಾಯಿ ತೆರದರೆ ರಸ ಒಸರುವ ಸಾಧ್ಯತೆ ಇರುವ ಕಾರಣ, ಅಪ್ಪ ಜಾಸ್ತಿ ಕಾಡಿಸಿಕೊಳ್ಳದೆ ನಮ್ಮ  ಹಣದ ಬೇಡಿಕೆಗೆ ಅಸ್ತು ಎನ್ನುತ್ತಿದ್ದರು. ಶಾಲಾ ಮಾಸ್ತರಿಕೆಯ ಅಲ್ಪ ಪಗಾರದಲ್ಲಿ ೫ ಮಕ್ಕಳ ಸಂಸಾರವನ್ನು ನಿಭಾಯಿಸುತ್ತಿದ್ದ ಸೀತಕ್ಕ ಯಾವ ಆರ್ಥಿಕ ತಜ್ಞರಿಗೂ ಕಡಿಮೆ ಇರಲಿಲ್ಲ. ಹಳ್ಳಿಯ ವಾತಾವರಣದ ಕಾರಣ, ದುಂದು ವೆಚ್ಚದ ಹವ್ಯಾಸ ಅವರಿಗಿರಲಿಲ್ಲ. ಮುದಗಲ್ ನ ಅಮರ ಟಾಕೀಸಿನಲ್ಲಿ ಸಿನಿಮಾಕ್ಕೆ ಹೋಗುವಾಗ, ನನ್ನನ್ನು ಹಾಗೂ ತಮ್ಮ ಪ್ರಹ್ಲಾದನನ್ನು ಎರಡೂ ಭುಜದ ಮೇಲೆ ಮಲಗಿಸಿ ಕೊಂಡು ಒಂದೆ ಟಿಕೆಟ್‌ ನಲ್ಲಿ ಮೂವರಿಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದರು. ಸಿನಿಮಾಕ್ಕೆ ಹೋಗಲಿರುವ ಸೂಚನೆ ಮಧ್ಯಾನ್ಹ ವೆ ನಮಗೆ ಸಿಗುತ್ತಿತ್ತು. ಅಂದಿನ ಆ ಖುಷಿ ಇಂದು ಸಿಗುವುದು ಸಾಧ್ಯವಿಲ್ಲ. ಅಪ್ಪನದ್ದು ಸರಕಾರಿ ನೌಕರಿಯ ಕಾರಣ ವರ್ಗಾವಣೆ ಇರುತ್ತಿತ್ತು. ನಮ್ಮಗಳ ಶಿಕ್ಷಣಕ್ಕಾಗಿ ಕೆಲ ವರ್ಷ ಮುದಗಲ್ ನಲ್ಲಿಯೇ ನಮ್ಮ ವಾಸ. ಅಪ್ಪ ಒಬ್ಬರೆ ನೌಕರಿಯ ಸ್ಥಳದಲ್ಲಿ ವಾಸಿಸುತ್ತಿದ್ದರು. ದಸರಿ, ದೀಪಾವಳಿಯ ದಿನಗಳಲ್ಲಿ ಅಮ್ಮನಿಗೆ ನಮ್ಮ ಕಾಟ ಅಷ್ಟಿಷ್ಟಲ್ಲ. ಅಪ್ಪಾ ಯಾವಗ ಬರ್ತಾರ, ಇನ್ನಾ ಯಾಕ ಬಂದಿಲ್ಲ, ಹೊಸ ಬಟ್ಟಿ ಯಾವಾಗ ಕೊಡಸ್ತಾರ, ಹೀಗೆ ಹಟ ಇರುತ್ತಿತ್ತು. ಹಬ್ಬದ ಹಿಂದಿನ ದಿನ  ಅಪ್ಪ ಬರಲಿಲ್ಲ ಎಂಬ ಬೇಸರದಲ್ಲಿಯೇ ನಿದ್ರೆಗೆ ಶರಣಾಗುತ್ತಿದ್ದೇವು. ಅಪ್ಪನ ಮೇಲೆ ನನಗೆ ವಿಶೇಷ ಪ್ರೀತಿ. ಅದ್ಹೇಗೊ ನಿದ್ರೆಯನ್ನು ನಿಯಂತ್ರಿಸಿ ಅಪ್ಪನ ಬರುವ ಕ್ಷಣಗಳಿಗೆ ಕಾದು, ಅವರು ಬಂದ ತಕ್ಷಣ ಅಪ್ಪಾ ಎಂದು ಕೂಗುತ್ತ ನನ್ಗೇನು ತಂದಿ ಎನ್ನತ್ತು ಅವರನ್ನ ಅಪ್ಪಿಕೊಳ್ಳುತ್ತಿದ್ದೆ. ಕೆಲವೊಮ್ಮೆ, ನಿದ್ರೆಗೆ ಶರಣಾಗಿ, ಯಾವಾಗಲೊ ಎಚ್ಚರವಾದಾಗ, ಊರಿಗೆ ಬಂದು ಮಲಗಿದ್ದ ಅಪ್ಪನ ಕೆನ್ನೆಯನ್ನು ಮುಟ್ಟಿ ಓ ಇದು ಕನಸಲ್ಲ,,,,,ಅಪ್ಪ ಬಂದಿದ್ದಾರೆ  ಎಂಬ ಖುಷಿಯಲ್ಲಿ ನಿದಿರಾ ದೇವಿಗೆ ಶರಣಾಗುತ್ತಿದ್ದೆ. ಸೀತಕ್ಕ, ಕಸಬಾ ಲಿಂಗ್ಸೂರಿನ ಶ್ರೀ ವರದೇಂದ್ರರ ಆರಾಧನೆ ಮತ್ತು ಶ್ರೀ ಕುಪ್ಪೆರಾಯನ ಜಾತ್ರಿ ತಪ್ಪಿಸುತ್ತಿರಲಿಲ್ಲ. ಸ್ವಲ್ಪ ನಾಸ್ತಿಕನಾಗಿದ್ದ ಅಪ್ಪ ಖರ್ಚಿನ ಈ ಬಾಬತ್ತಿ ಗಾಗಿ ಅಮ್ಮನೊಡನೆ ಮನಸ್ತಾಪ ಆಗುತ್ತಿತ್ತು. ಗೆಲುವು  ಸದಾ ಅಮ್ಮದ್ದಾಗಿರುತ್ತಿತ್ತು. ಎಲ್ಲ ಮಕ್ಕಳನ್ನು ಕಟ್ಟಿಕೊಂಡು ಅಮ್ಮನ ಈ ಯಾತ್ರೆ ಯಶಸ್ವಿಯಾಗಿ ಮುಗಿಯುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆನಂತೆ. ಅಗಸಿ ಹತ್ತಿರದಿಂದಲೇ   ನನ್ನ ಅಳು ದನಿ ಕೇಳಿದ ಹನುಮಣ್ಣ(ಅಮ್ಮನ ಸೋದರ ಮಾವ) ಸೀತಿ ಬಂದ್ಲು ಎಂದು ಘೋಷಣೆ ಮಾಡುತ್ತಿದ್ದನಂತೆ.  ಮುದಗಲ್ ಮೊಹರಮ್ ದಿನಗಳಲ್ಲಿ , ಕೆಂಪು ಸಕ್ಕರಿ ಅರ್ಪಿಸುವುದನ್ನು ಅಮ್ಮ ಮರೆಯುತ್ತಿರಲಿಲ್ಲ. ಮೊಹರಮ್ ಕೊನೆ ದಿನದ ದೇವರುಗಳ ಮೆರವಣಿಗೆ, ಲಯಬದ್ಧ ನಗಾರಿ ಶಬ್ದ ಇನ್ನೂ ನಾನು ಮರೆತಿಲ್ಲ. ಸೀತಕ್ಕ ನಿಗೆ ಸ್ವಂತ ಮನೆಯ ಆಸೆ ಬಹಳಿತ್ತು. ಆದರೆ, ವಿಧಿಯಾಟ ಬೇರೆನೆ ಇತ್ತು. ೧೯೯೧ ರಲ್ಲಿ ಅಪ್ಪ ,೧೯೯೫ ಲ್ಲಿ ಅಮ್ಮಾ ಶ್ರೀ ಹರಿಯ ಪಾದ ಸೇರಿದರು. ನಾವು ೫ ಜನ ಮಕ್ಕಳು ಸ್ವಂತ ಮನೆ ಯಲ್ಲಿದ್ದೇವೆ. ಆದರೆ, ನೋಡಿ ಖುಷಿ ಪಡುವ ಅಪ್ಪ ,ಅಮ್ಮ ಇಲ್ಲ ಅಷ್ಟೇ. ಮೊಂಬತ್ತಿಯ ಹಾಗೆ ಕರಗಿ ನಮ್ಮೆಲ್ಲರ ಬಾಳನ್ನು ಬೆಳಗಿದ ಅಪ್ಪಾ ಅಮ್ಮ, ಸೀತಕ್ಕ-ರಾಘಪ್ಪ ನಮಗೆ ಪ್ರಾತಃಸ್ಮರಣೀಯರು.

No comments:

Post a Comment