ವೈನಿ:
ಈ ವೈನಿ ಬಗ್ಗೆ ಬರೆಯೋದು ಸುಲಭದ ತುತ್ತಲ್ಲ. ನಿವಂದ್ಕೊಂಡ ಹಾಗೆ ಈ ವೈನಿ ನನ್ನಣ್ಣನ ಪತ್ನಿಯೂ ಅಲ್ಲ. ಇವರು ಇಡೀ ಮುದಗಲ್ ಪಟ್ಟಣಕ್ಕೇನೆ ವೈನಿ.ಹೌದು ಅಂತಹ ವ್ಯಕ್ತಿತ್ವ ಅವರದ್ದು. ಅದು ಪ್ರಾಯಹಃ, ೭೦ರ ದಶಕದ ನನ್ನ ಪ್ರಾಥಮಿಕ ಶಾಲೆಯ ದಿನಗಳವು. ನಾನು ಹೇಳ ಹೊರಟಿರುವ ವೈನಿ(ಇಂದಿಗೂ ಅವರ ಹೆಸರು ಗೊತ್ತಿಲ್ಲ)ನನ್ನ ಬಾಲ್ಯದ ದಿನಗಳಲ್ಲಿ, ಅಮ್ಮನನ್ನು ಹೊರತು ಪಡಿಸಿ ಅತ್ಯಂತ ಪ್ರಭಾವ ಬೀರಿದವರು. ಹಣೆಗೆ ಢಾಳಾದ ಕುಂಕುಮ, ಒಂಭತ್ತು ಗಜದ ಸೀರಿ ಕಚ್ಚಿ ಹಾಕಿ ಉಟ್ಟು ಪಾದರಸದಂತೆ ಓಡಾಟದ ನಮ್ಮ ವೈನಿ ಇರದ ಕಾರ್ಯಕ್ರಮಳೆ ವಿರಳ ಮುದಗಲ್ ನಲ್ಲಿ. ವಿಶೇಷವಾಗಿ ದೀಪಾವಳಿಯ ನಸುಕಿನ ಆರತಿಯ ಕ್ಷಣಗಳನ್ನು ಮರೆಯಲಾರೆ. ನಮ್ಮೂರಲ್ಲಿ ಈ ಆರತಿ ಎಲ್ಲರ ಮನೆಯಲ್ಲಿ ನಡೆಯುತ್ತದೆ. ಆ ಸಂಭ್ರಮ. ಸೊಗಸೇ ಬೇರೆ. ಆರತಿ ತಟ್ಯಾಗ ಯಾರ್ಯಾರ ರೊಕ್ಕ ಹಾಕಿರ್ತಾರ, ಅವರ ಮನಿಯೊಳಗಿನ ಆರತಿ ಸಂಧರ್ಭದಲ್ಲಿ ನಾವು ಮರಳಿ ರೊಕ್ಕ ಹಾಕುವುದು ಒಂದು ಪದ್ಧತಿ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ, ಅಯಾ ಮನೆಗಳ ಆರತಿಯ ಸಂಧರ್ಭದಲ್ಲಿ ಎಚ್ಚರಿಸುವುದು ನಮ್ಮ ಈ ವೈನಿಯ ವಿಶೇಷ ಗುಣ. ಮದುವೆಯ ಸಡಗರದಲ್ಲಿ ವೈನಿ ಬರುವುದು ತಡವಾದರೆ ಏನೋ ಕಳಕೊಂಡವರಂತೆ ಚಡಪಡಿಕೆ. ಎಲ್ಲರನ್ನು ಹುರಿದುಂಬಿಸಿ ಬೀಗರನ್ನು ಎದಿರುಗೊಂಡು, ವಾಗ್ನಿಶ್ಚಯ, ಭೂಮದೂಟ, ವ್ಯಂಗಭರಿತ ಹಾಡುಗಳು ಎಲ್ಲದರಲ್ಲೂ ವೈನಿ ಮುಂದೆ. ಮರು ದಿವ್ಸ, ಸುರಗಿ, ಪುಣೋಚನ, ಅಕ್ಷತೆ, ಲಡ್ಡಿಗಿ ಭೂಮ, ಲಾಜಾ ಹೋಮ, ಸಿಂಧೂಪ, ಹೆಣ್ಣು ಒಪ್ಸ್ಕೊಳ್ಳೊದು ಎಲ್ಲದರಲ್ಲಿ ವೈನಿಯ ಪರಿಣತಿ ಎದ್ದು ಕಾಣುತಿತ್ತು. ಹೆಣ್ಣು ಒಪ್ಪಿಸುವ ಘಳಿಗೆಯಲ್ಲಿನ ವೈನಿಯವರ ಹಾಡು ನೇರ ನಮ್ಮ ಭಾವತಂತಿ ಮೀಟಿ ಕಂಗಳಿಂದ ಅಶ್ರುಧಾರೆ ಶತಸಿದ್ಧ. ಅವರೇ ಸಾವರ್ಸ್ಗೊಂಡು ' ಅತ್ತದ್ದು ಸಾಕು ಮುಂದಿನ ಕೆಲ್ಸ ಸಾಗಸ್ಸಣ ನಡಿರಿ'ಎನ್ನುತ್ತಾ ಎಲ್ಲವನ್ನು ಸಾಂಗೊಪಾಂಗವಾಗಿ ನೆರವೇರುವಂತೆ ಮಾಡುವ ಕುಶಾಗ್ರಮತಿ ವೈನಿ. ನಮ್ ಮುತ್ಯಾ(ಅಮ್ಮನ ತಂದೆ) ಸಂಜಿ ಮುಂದ ವೈನಿ ಮನಿ ಕಟ್ಯಾಗ ಕೂತ್ಗೊಂಡು ಜೋತಿಷ್ಯ ಹೇಳುತ್ತಿದ್ದ ದೃಶ್ಯ ಇನ್ನು ನನ್ನ ಸ್ಮೃತಿಪಟಲ ದಿಂದ ಮಾಸಿಲ್ಲ. ಇನ್ನೂ ಬೇರೆ ಊರಿಂದ ಬಂದವರಿಗೆ ವೈನಿ ಮನಿ ಒಂದು land mark.ವಿಳಾಸ ಹುಡುಕವ್ರಿಗೆ,,,,,'ವೈನಿ ಮನಿಗೆ ಹೋಗಿ ಮುಂದ ಬಲಕ ಹೊಳ್ರಿ' ಎಂಬಂತಹ ಉಲ್ಲೇಖಗಳು ಸಾಮಾನ್ಯ. ನಾಗರ ಪಂಚಮಿ ಸಮಯದ ಅವರ ಮನೆಯ ಚಿಗಳಿ,ತಂಬಿಟ್ಟು, ಅಳ್ಳಿನ ರುಚಿ ಸವಿದವನೆ ಬಲ್ಲ. ಏನೇ ಕೌಟುಂಬಿಕ ಕಾರ್ಯವಿರಲಿ ಮೊದಲ ಹಾಜರಾತಿ ವೈನಿಯದು. ಸಾವಿನ ಮನೆಯಲ್ಲಿ ಸಾಂತ್ವನ ಹೇಳುವ ಇವರ ಕಳಕಳಿ ಮರೆಯಲಾಗದ್ದು. ತನ್ನ ನಾಲ್ಕು ಮಕ್ಕಳನ್ನು ಬುದುಕಿನ ದಡಕ್ಕೆ ಸೇರಿಸಿದ ಇಂತಹ ಅಃತಕರಣದ ಜೀವ ಶ್ರೀ ಹರಿಯ ಪಾದ ಸೇರಿಕೊಂಡು ಬಹಳ ದಿನಗಳಾಗಿವೆ. ಈಗಿನ ಪಿಳಿಗೆ ನಂಬಲು ಅನುಮಾನಿಸುವ ವ್ಯಕ್ತಿತ್ವ ನಮ್ಮ ವೈನಿಯದ್ದು.
No comments:
Post a Comment