Tuesday, November 24, 2020

Opinion about my letters

 https://m.facebook.com/story.php?story_fbid=3674763379229604&id=100000879335240

Sunday, November 22, 2020

ತಾತ

ತಾತ: ಅವು ೭೦ರ ದಶಕದ ಮುದಗಲ್ ನ ತಾತನ ಮನೆಯಲ್ಲಿ ಕಳೆದ ಪ್ರಾಥಮಿಕ ಶಾಲೆಯ ದಿನಗಳು. ನಮಗೆಲ್ಲ ಶಾಲೆಯ ಹೋಗುವ ಮೊದಲು ತಿಂಡಿ ಅಂತಾ ಏನು ಕೊಡ್ತಿರಲಿಲ್ಲ. ಹಿಂದಿನ ರಾತ್ರಿಯ ಊಟಕ್ಕೆ ಅನ್ನವನ್ನು ಸ್ವಲ್ಪ ಹೆಚ್ಚಿಗೆ ಮಾಡಿರುತ್ತಿದ್ದರು. ಮರುದಿನ ಅದಕ್ಕೆ ಸ್ವಲ್ಪ ಒಗ್ಗರಣೆ ಹಾಕಿ ಮೇಲೆ ಮೆಂತ್ಯದ ಹಿಟ್ಟು ಉದರಿಸಿರುತ್ತಿದ್ದರು. ಹಿರಿಯಣ್ಣನಾದ ನಾನು, ಅನ್ನವನ್ನು ಕ್ರಮಬದ್ದವಾಗಿ ಉಪ್ಪಿನೊಂದಿಗೆ ಕಲೆಸಿ ಇಬ್ಬರು ತಮ್ಮಂದಿರು ಸೇರಿಕೊಂಡು ಮೂರು ಭಾಗ ಮಾಡುತ್ತಿದ್ದೆ. ಮೂರು ಭಾಗ ಮಾಡುವಾಗ ಅಮಾಯಕ ತಮ್ಮಂದಿರ ಭಾಗದಲ್ಲಿ ರವಷ್ಟನ್ನು ನನ್ನ ಭಾಗಕ್ಕೆ ಎಳೆದುಕೊಂಡು ಬಿಡುತ್ತಿದ್ದೆ. ಅವೆರಡು, ಕಣ್ಣನ್ನು ಪಿಳಿ ಪಿಳಿ ಬಿಟ್ಟಿಕೊಂಡು ಪಾಲಿಗೆ ಬಂದದ್ದು ಪಂಚಾ‌ಮೃತ ಅಂತಾ ಉದರಕ್ಕೆ ಸೇರಿಸುತ್ತಿದ್ದರು. ಮೂಲತಃ ವೈದಿಕ ವೃತ್ತಿಯ ನಮ್ಮ ತಾತ ಭೀಮ ಭಟ್ ಜೋಶಿಗೆ ಹೇಳಿಕೊಳ್ಳುವ ಆದಾಯವಿರಲ್ಲಿಲ್ಲ. ವೈದಿಕ ಮತ್ತು ಜೋತಿಷ್ಯದ ಆದಾಯವೇ ಬದುಕು ಸವೆಸಲು ಮೂಲ ಸೆಲೆ. ಜೊತೆಗೆ ಮೂರು ವರ್ಷ ನಾವು ಬೇರೆ ದಾಂಗುಡಿ ಹಾಕಿದ್ದೆವು. ಆದರೂ, ನಮ್ಮ ತಾತನ ಹಣಕಾಸು ನಿರ್ವಹಣೆ ಅದ್ಭುತವಾಗಿತ್ತು. ವಿನಾಃ ಕಾರಣ ಯಾವುದೇ ಖರ್ಚಿಗೆ ಮುಂದಾಗದೆ ತಾತ ಬಂದ ಆದಾಯವನ್ನು ಕೂಡಿಡುತ್ತಿದ್ದರು. ರಜಾದಿನಗಳಲ್ಲಿ, ಮಂಡಾಳನ್ನು ಹುರಿದು ಚುರುಮುರಿ ಮಾಡಿ ಕೊಡುತ್ತಿದ್ದರು. ಅದರೊಳಗಿನ ಶೆಂಗಾ, ಪುಟಾಣಿಗಳನ್ನು ಹುಡುಕಿ ಹುಡುಕಿ ತಿನ್ನುವ ಮಜಾ ಏನು ಹೇಳಲಿ. ಮನೆಯಲ್ಲಿ ಹಿರಿಯರ ಶ್ರಾದ್ಧದ ದಿನಗಳಂದು, ಎಲ್ಲಾ ವಿಧಿಗಳು ಮುಗಿದು ಆಚಾರ್ಯರ ಭೋಜನ ನಂತವೇ ನಮ್ಮ ಸರದಿ. ಆದಾಗ್ಯೂ ತಾತ,ಆಚಾರ್ಯ ರಿಗೆ ಶ್ರೀ ಲಕ್ಷ್ಮಿ ವೆಂಕಟರಮಣ ಗೋವಿಂದ ಎಂದು ಹೇಳಿ ಅವರು ಮೊದಲ ತುತ್ತು ಬಾಯಿಗೆ ಇಟ್ಟ ನಂತರ ನಮಗೆಲ್ಲ ಮಧ್ಯಂತರ ಪರಿಹಾರವಾಗಿ ಒಂದೊಂದು ರವಾ ಉಂಡಿಯನ್ನು ಕೊಟ್ಟಿರುತ್ತಿದ್ದರು. ಮೊದಲೆ ಹಸಿವಿನಿಂದ ಕಂಗೆಟ್ಟಿದ್ದ ನಾವುಗಳು ಕೈಗೆ ಬಂದ ಭಕ್ಷವನ್ನು ಕುಣಿದಾಡುತ್ತಾ ತಿನ್ನುತ್ತಿದ್ದೇವು. ತಾತ ಅವರು ಆಹ್ನಿಕ ಕಾರ್ಯ ಗಳಿಗೆ ಹೋದಾಗ ನಾವು ಹಿಂಬಾಲಿಸುತ್ತಿದ್ದೇವು. ಶ್ರೀ ಸತ್ಯನಾರಾಯಣ ಪೂಜೆ, ಶ್ರಾದ್ಧ ಇತ್ಯಾದಿಗಳಲ್ಲಿ ನಮಗೂ ದಕ್ಷಿಣೆ ಲಭಿಸುತ್ತಿತ್ತು. ದಸರೆಯ ದಿನದಂದು ಬನ್ನಿ ಕೊಟ್ಟು ತಾತನ ಆರ್ಶಿವಾದ ಪಡೆಯಲು ಇಡೀ ಊರಿನವರ ಪೈಪೋಟಿಯೇ ಇರುತ್ತಿತ್ತು. ಅಂದು ಅವರ ರೆವಿನ್ಯೂ ಜೋರಾಗಿರುತ್ತಿತ್ತು. ರೊಕ್ಕ ಎಣಿಸಿಕೊಡುವ ನೆಪದಲ್ಲಿ ಒಂದೈದು ರೂಪಾಯಿಯನ್ನು ಎಗರಿಸುತ್ತಿದ್ದೆ. ತಾತ ಅವರ ಜೋತಿಷ್ಯ ಅದ್ಭುತವಾಗಿತ್ತು. ಲೋಬಾನ ಮಂತ್ರಿಸಿ ಕೊಡುವುದು, ದಿನ ತುಂಬಿದ ಗರ್ಭಿಣಿಯರು ತಾತ ಮಂತ್ರಿಸಿದ ಬೆಲ್ಲ ತಿಂದು ಪ್ರಸವ ಸರಾಗವಾಗುತ್ತಿತ್ತು. ಮೇಲುಮುದ್ದೆ ಹಾಕಿದ ಮನೆ. ಆಗಾಗ ಮಣ್ಣು ಉದುರುತ್ತಿತ್ತು. ಬಂಕ ಸೇರಿಕೊಂಡು ೫ ಖೊಲಿಗಳ ಮನೆ. ಅಡುಗೆ ಮನೆಗೆ ನೆಲಹಾಸು ಇರಲ್ಲಿಲ್ಲ. ಗೋಮಯದಿಂದ ಸಾರಿಸುತ್ತಿದ್ದರು. ಪತ್ನಿಯನ್ನು ಕಳೆಕೊಂಡಿದ್ದ ತಾತನ ಸೇವೆಗಾಗಿ ಹುಲಿಹೈದರಿನ  ದೊಡ್ಡವ್ವನ ಮಗಳು ನಮ್ಮಕ್ಕ ಸುಧಾ ಇದ್ದಳು.   ಒಂದ್ಸಾರಿ, ತಮ್ಮ ಪ್ರಹ್ಲಾದ್ ಗಿಡದಿಂದ ಬಿದ್ದು ತಾನೆ ದವಾಖಾನಿಗೆ ಹೋಗಿ ಅರವಳಿಕೆ ಇಲ್ಲದ ಕಾರಣ ಹಾಗೇಯೆ ಹೊಲಿಗೆ ಹಾಕಿಸಿಕೊಂಡು ಮನೆಗೆ ಬಂದಿದ್ದ. ಇನ್ನೊಬ್ಬ ತಮ್ಮ ಪ್ರಾಣೇಶ ಶ್ರೀ ಹಾಲುಭಾವಿ ವೀರಣ್ಣ (ವೀರಭದ್ರ) ಗುಡಿಯ ಬಳಿಯ ಗುಡ್ಡದ ಎರಡು ದೊಡ್ಡ ಕಲ್ಲುಗಳ ಸಂದಿಯಲ್ಲಿ ಜಾರಿ ಬಿದ್ದಿದ್ದ. ಅವನನ್ನು ನೋಡಲು ಇಡೀ ಊರಿಗೆ ಊರೇ ನೆರೆದಿತ್ತು. ದೇವರ ದಯೆಯಿಂದ ಬೇಗನೆ ಚೇತರಿಸಿಕೊಂಡ. ನಂತರ ನಾವು, ನಮ್ಮ ತಂದೆಯವರು ಕಾರ್ಯನಿರ್ವಹಿಸುವ ಶಿವಮೊಗ್ಗಾ ಜಿಲ್ಲೆಯ ಹೊಸನಗರಕ್ಕೆ  ಸ್ಥಳಾಂತರಗೊಂಡೆವು. ಆಮೇಲೆ, ಬೇಸಿಗೆ ರಜದಲ್ಲಿ ಮುದಗಲ್ ಗೆ  ಬರುವುದನ್ನು ಶುರುವಿಟ್ಟು ಕೊಂಡೆವು. ವರಮಾನದ ಕೊರತೆಯೋ ಏನೋ, ತಾತ ಅಪರೋಕ್ಷವಾಗಿ  ಎಷ್ಟು ದಿವ್ಸ ಇರ್ತಿರಿ,,,,,ನಾನು ರೊಕ್ಕದ ಗಿಡ ನೆಟ್ಟಿಲ್ಲ,,,,,ಭೇಟಿ ಆತಲ್ಲ ಇನ್ನ ನಡಿರಿ ನಿಮ್ಮೂರಿಗೆ ಎಂದಿದ್ದ. ನಮ್ಮಮ್ಮ, ನಡಿರೆಪಾ ತೌರ ಮನಿನೇ ಹೋಗು ಅಂದ್ಮೇಲೆ ಇಲ್ಲಿರಬಾರದು ಎಂದು ಲಗೇಜನೊಂದಿಗೆ ಸಿದ್ಧ ರಾಗಿ ಕಣ್ಣಿರಿಡುತ್ತ ಅಮ್ಮ ಹೋಗಿಬರುವ ಆರ್ಶಿವಾದ ಪಡೆಯಲು ತಾತನ ಕಾಲಿಗೇರಗಿ ಇನ್ನೇನು ತಲಬಾಗಿಲು ದಾಟಬೇಕು,,,, ಅಷ್ಟರಲ್ಲಿ ಮಿಂಚಿನಂತೆ ಓಡಿಬಂದು ತಾತ ಅಡ್ಡ ನಿಂತಿಂದ್ದ. ಎರಡೂ ಕಣ್ಣಗಳಲ್ಲಿ ಅಶ್ರುಗಳು ಭೋರ್ಗರೆಯುತ್ತಿದ್ದವು. ಅದೆಂಗ್ಹ ಹೋಗ್ತಿರಿ,,,,,ಸಿಟ್ನಾಗ ಏನ ಅಂದ್ರ ಅದನ್ನ ಖರೆ ಮಾಡ್ತೀಯೇನು ಸೀತಿ( ಸೀತಾ ನಮ್ಮಮ್ಮನ ಹೆಸರು)ಹೀಗೆ ಹೇಳಿ ಮತ್ತೊಂದು ತಿಂಗ್ಳು ಮುದಗಲ್ ನಲ್ಲಿಯೇ ಉಳ್ಸಿಕೊಂಡದ್ದನ್ನ ಮರೆಯಲಾದು. ೧೯೭೪ರಲ್ಲಿ ಮುದಗಲ್ ನಿಂದ ಐದು ಬಸ್ ಬದಲಾಯಿಸಿ ಹೊಸನಗರಕ್ಕೆ ಬಂದು ನಮ್ಮನೆಲ್ಲ ಕಂಡು ಹೋಗಿದ್ದ. ತಾತ, ಪ್ರಯಾಣಕ್ಕೆ ಬಳಸುತ್ತಿದ್ದುದು 'ಹಸಿಬಿ' ಎಂಬ ಬಟ್ಟೆಯಿಂದ ಮಾಡಿದ ಆಗಿನ ಕಾಲದ ಸೂಟಕೇಸನ್ನ. ತಿರುಪತಿ,  ಮಂತ್ರಾಲಯಕ್ಕೆ ನಿಯಮಿತ ಭೇಟಿ ನೀಡ್ತಿದ್ದ. ಲಿಂಗ್ಸೂರಿನ ಶ್ರೀ ಕುಪ್ಪೆರಾಯನ ಜಾತ್ರೆಯಲ್ಲಿ ರಥದಲ್ಲಿ ಕೂರುವ ಅಧಿಕಾರ ಮಠಾಧಿಕಾರಿಯಾಗಿ ಇತ್ತು. ಶ್ರೀ ವರದೇಂದ್ರರ ಆರಾಧನೆಯಲ್ಲಿ ಒಮ್ಮೆ ಅಲಂಕಾರದ ಭೋಜನಕ್ಕೆ ಕುಳ್ಳಿರಿಸಿದ್ದರು. ಬಾಳೆ ಎಲೆಯಲ್ಲಿ ಬಡಿಸಲಾಗಿದ್ದ ಪಂಚಭಕ್ಷ್ಯ ಪರಮಾನ್ನ ಗಳನ್ನು ತಿನ್ನದೆ ಮಂತ್ರ ಹೇಳುತಿದ್ದ ತಾತನಿಗೆ  ಎಲ್ಲವನ್ನೂ ತಿನ್ನು ಎಂದು ಸಂಜ್ಞೆಯ ಮೂಲಕ ಹೇಳಿ ಆಮೇಲೆ ಬೈಯ್ಸಿಕೊಂಡಿದ್ದೆ. ಮುಂದೆ ೧೯೮೨ರಲ್ಲಿ ತನ್ನ ಪ್ರೀತಿಯ ಮಗಳು ಅಂದರೆ ನಮ್ಮಮ್ಮನ ಬಳಿಯೆ ಕಲಬುರಗಿ ಯಲ್ಲಿ  ಶ್ರೀಹರಿಯ ಪಾದ ಸೇರಿಕೊಂಡ. ತಾತನ ಪ್ರಭಾವ ನಮ್ಮ ಐದು ಮೊಮ್ಮಕ್ಕಳಲ್ಲಿ ಢಾಳಾಗಿದೆ. ಪದ್ಮ ಸುಶಿಲ ಮತ್ತು ರಮೇಶ ಆ ಇಬ್ಬರು ಮೊಮ್ಮಕ್ಕಳು.

ಬಾಲ್ಯದ ಅಟ-ಆ ಹುಡುಕಾಟ

ಬಾಲ್ಯದ ಆಟ,,,,,ಆ ಹುಡುಗಾಟ


ಮುದಗಲ್ ನಲ್ಲಿಯ ನನ್ನ ಬಾಲ್ಯದ ನೆನಪುಗಳು ಯಾವಾಗಲೂ ಮಧುರ ಅಲೆಗಳನ್ನು ಉಕ್ಕೆರಿಸುತ್ತವೆ. ಪ್ರಾಥಮಿಕ ಶಾಲೆಯ ವಿದ್ಯಾರ್ಜನೆಯ ಕಾಲಘಟ್ಟ ಅದು. ಪಾಠ ಮಾಡುವುದಾದಮೇಲೆ ಮಾಸ್ತರ್ ಪ್ರಶ್ನೆ ಕೇಳುತ್ತಿದ್ದರು. ಉತ್ತರ ಹೇಳದವರನ್ನು ನಿಲ್ಲಿಸುತ್ತಿದ್ದರು. ಉತ್ತರ ಗೊತ್ತಿರುವವರು ಕೈ ಎತ್ತಬೇಕಿತ್ತು. ಆಗ ನಾನು ಶ್ಯಾಣ್ಯಾ ಎಂದೆ ಗುರುತಿಸಲ್ಪಟ್ಟಿದ್ದೆ(ಈಗ?????). ನಾನು ಕೈ ಮೇಲೆತ್ತುತ್ತಿದ್ದೆ. ಆಗ, ನನ್ನ ಸಹಪಾಠಿ ಭಾಗ್ಯಶ್ರೀ ' ಈಗ  ಕೈ ಎತ್ತ ಬ್ಯಾಡ,,,,ಇನ್ನೊಂದಿಷ್ಟ ಹುಡುಗ್ರು ನಿಂದಲ್ರಿ,,,,ಮೂಗ ಹಿಡದ ಕಪಾಳಕ್ಕ ಹೊಡಿಬಹುದು' ಅಂತಾ ಹೇಳಿದ್ಳು. ಉತ್ತರ ತಿಳಿಯದಿರುವವರಿಗೆ ಉತ್ತರ ಹೇಳಿದವರು ಮೂಗೂ ಹಿಡಿದು ಹೊಡೆಯ ಬೇಕಿತ್ತು. ಜಾಸ್ತಿ ಗೆಳೆಯರಿಗೆ ಹೊಡೆಯ ಬಾರದು ಎನ್ನುವ ಸದಿಚ್ಛೆ ನನ್ನದಾಗಿತ್ತು. ಉತ್ತರ ಹೇಳಿದ ನಂತರ ಮಾಸ್ತರ್ ಅವ್ರು ಉತ್ತರ ಹೇಳದ ೫ ಸಹಪಾಠಿಗಳಿಗೆ  ಕಪಾಳಕ್ಕೆ ಹೊಡೆಯಲು ಅಣತಿ ನೀಡಿದರು. ಸಹಪಾಠಿಗಳ ಮೇಲೆ ಅನುಕಂಪ ಇದ್ದ ನಾನು ಸುಮ್ನೆ ಹೊಡೆಯುವ ಶಾಸ್ತ್ರ ಮಾಡಿದೆ. ಮಾಸ್ತರ್ ಸಿಟ್ಟು ನೆತ್ಯಿಗೇರಿತು. ' ಅಲ್ಲಲೇ ಕಪಾಳ ಹೊಡಿಲೇ ಅಂದರ ದೋಸ್ತ್ರ ಗಲ್ಲ ಸವರರ್ತಿ,,,,ಇಲ್ಲಿ ಬಾ ಹ್ಯಾಂಗ್ ಹೊಡಿಬೇಕು ಅಂತಾ ನಾ ತೋರರ್ಸತೀನಿ' ಅಂದ ಕಪಾಳಕ್ಕೆ ಒಂದು ಬಿಟ್ಟರು. ಒಂದು ಕ್ಷಣ ತಲೆ ಗಿರಗುಟ್ಟಿದ ಹಾಗಾಗಿತ್ತು. ಆಮ್ಯಾಲ, ತೋಗೋರಿ, ನಾನು ಕೈ ಸಡಿಲ ಬಿಟ್ಟು ಕಪಾಳಕ್ಕ ಬಾರ ಮೂಡು ಹಂಗ ಹೊಡದಿದ್ದೆ. ಒಬ್ಬಾಂವನ ಮೂಗಿನಾಗಿನ ಶ್ರೀಮಂತಿಕೆ ಎಲ್ಲಾ ಹೊರಗ ಬಂದಿತ್ತು. ನಾಗರಾಜ ರಾವ್ ಅನ್ನೊ ಮಾಸ್ತರ್ ಇದ್ರು. ಅವರ ಪತ್ನಿ ಯೂ ಟೀಚರ್. ದೂರದ ಮೈಸೂರಿಮವರು. ಅವರು ನಮಗೆ ದೈಹಿಕ ಶಿಕ್ಷಣ ಹೇಳಿ ಕೊಡ್ತಿದ್ರು. ಲೇಜಿಂನ್ನು ಲಯಬದ್ಧ ವಾಗಿ ನುಡಿಸುತ್ತಾ,  ಹಾಡುತ್ತಾ ಕುಣಿಯುತ್ತಾ ಬಹಳ ಆನಂದದಿಂದ ಕಲಿಯುತ್ತಿದ್ದೆವು. ಮೇಲಾಧಿಕಾರಿಗಳ ವೀಕ್ಷಣೆ ದಿನದಂದು ಶ್ಯಾಣಾ ಹುಡುಗರನ್ನ ಇಡೀ ತರಗತಿಯಲ್ಲಿ ಒಂದೊಂದು ಸಾಲಿಗೆ ಒಬ್ಬರಂತೆ ಕುಳ್ಳಿರಿಸಿ, ಪ್ರಶ್ನೆ ಕೇಳಿದಾಗ ಆ ವಿದ್ಯಾರ್ಥಿಯೇ ಉತ್ತರ  ನೀಡುವಂತೆ ನೋಡಿಕೊಂಡು ಅಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತಿದ್ದರು. ಪ್ರತಿ ದಿನವೂ ಪ್ರಾರ್ಥನೆ ನಂತರ ,ಪಂಚಾಂಗ ಪಠಣ, ನುಡಿಮತ್ತು ಹೇಳುವುದು ಇರುತ್ತಿತ್ತು. ಒಮ್ಮೆ, ಅಧಿಕಾರಿಗಳು ಪ್ರಾರ್ಥನೆ ಸಮಯದಲ್ಲಿ ಉಪಸ್ಥಿತಿಯಲ್ಲಿ ನನ್ನ ತಮ್ಮ ಪ್ರಹ್ಲಾದ್ (ಭೀಮ್ಭಟ್ರ ಪಲ್ಯ ಅವನ ಜನಪ್ರಿಯ ನಾಮಧೇಯ) 'ಅಧಿಕಾರ ಬಂದಾಗ ಅರಿತು ನಡೆ' ಎಂಬ ನಾಣ್ಣಿಡಯನ್ನ ಹೇಳಿಬಿಟ್ಟ. ಹೆಡ್ ಮಾಸ್ತರ್ ಸಂಕೋಚ ಭಾವದಿಂದ ಅಧಿಕಾರಿಯತ್ತ ಚಿತ್ತ ಹರಿಸಿದ್ದರು. ಆ ಅಧಿಕಾರಿ, ಸಿಟ್ಟಾಗದೆ, 'ಹುಡುಗರನ್ನ ಹೀಗೆಯೇ ಸಿದ್ದಪಡಿಸ ಬೇಕು' ಅವರು ಹೆದರ ಬಾರದು ಎಂದು ಹೇಳಿ ಮಾಸ್ತರ್ ರ ಅಂಜಿಕಿನ ದೂರ ಮಾಡಿದ್ರು ಅಂತಾ ಆಮೇಲೆ ಗೊತ್ತಾತು. ಒಮ್ಮೆ ವೀರಭದ್ರಪ್ಪ ಸರ್ ಅವರು ನಮ್ಮಿಂದ ನಾಟಕಾ ಮಾಡ್ಸಿದ್ರು. ಅಲ್ಲಿ ಭಿಕ್ಷೆ ಬೇಡುವ ದೃಶ್ಯ ಬರ್ತದೆ. ಹಿಮ್ಮೆಳದಲ್ಲಿ ಕಾಸು ನೀಡುವಂತೆ ಆಗ್ರಹಿಸಿ ಹಾಡು ಹಾಡ್ತಾಇದ್ರು. ಕರಗಿದ ಪ್ರೇಕ್ಷಕರು ನಾಣ್ಯಗಳನ್ನು ಎಸೆಯಲು ಶುರು ಮಾಡಿದ್ರು. ನಾನು ನನ್ನ ಪತ್ನಿಯ ಪಾತ್ರಧಾರಿ ದೋಸ್ತ,,,,ನಾಣ್ಯಗಳನ್ನು ಹೆಕ್ಕಿ ಕೊಳ್ಳಲು ನಾ ಮುಂದೂ ತಾ ಮುಂದೂ ಎಂದು ಪೈಪೋಟಿಗೆ ಬಿದ್ದೆವು. ಸರ್ ಸಂಜ್ಞೆಗೂ ಬಗ್ಗಿರಲಿಲ್ಲ. ನಾಟಕ ಮುಗಿದು 'ಆಹೇರು' ಶುರು ಆಯ್ತು. ನನ್ನ ತಾತ ಐದು ರೂಪಾಯಿ ನೀಡಿದ್ರು. ಹೆಕ್ಕಿದ ನಾಣ್ಯಗಳಲ್ಲಿ ಇಬ್ರೂ ಸಮಪಾಲು ತೋಗೋರಿ ಅಂತ ಸರ್ ಪರ್ಮಾನು ಹೊರಡಿಸಿದ್ರು. ಬಾಲ್ಯದ ಇನ್ನೊಂದೆರಡು ಸಂಗತಿ ನಾನು  ಹೇಳ್ಳೆ ಬೇಕು. ದೇಶಪಾಂಡೆ ಓಣಿಯ ಬಳಿ ಮಸೀದಿ ಇದೆ. ಸಂಜೆಯ ಸಮಯದಲ್ಲಿ 'ಸ್ಟಾಪ್' ಆಟದಲ್ಲಿ  ಕೆಲವರು ಅಡಗಿಕೊಳ್ಳಲು ಮಸೀದಿಯೊಳಗಿನ ಕಟ್ಟಿಗೆಯ ಶವವಾಹ ಪೆಟ್ಟಿಗೆಯನ್ನು ಬಳಸುತ್ತಿದ್ದರು. ಅವರಲ್ಲಿ ನನ್ನ ಇನ್ನೊಬ್ಬ ತಮ್ಮ ಪ್ರಾಣೇಶ(ಪಾಣಾ) ನೆನಸಿಕೊಂಡರೆ ಈಗ ಭಯವಾಗುತ್ತದೆ. ಮುದಗಲ್ನಲ್ಲಿ ಬೇಸಿಗೆಯ ರಜಾ ದಿನಗಳಲ್ಲಿ, ಬಾವಿಯಲ್ಲಿ  ಈಸಾಡುವ ಆನಂದ  ಅದ್ಭುತ. ದಿನವೂ ಮೂರು ತಾಸು ಈಜಾಟ. ಕಲಿಯುವವರಿಗೆ ನಾನೂ ಒಬ್ಬ ತರಬೇತುದಾರ. ಹುಡುಗರ ಬೆನ್ನಿಗೆ, ಕಟ್ಟಿಗೆಯ ಪೆಂಡಿ, ಡಬ್ಬ, ದೊಡ್ಡ ಒಣಗಿದ ಕುಂಬಳ ಕಾಯಿ ಕಟ್ಟಿ ಬಾವಿಗೆ ದೂಡುತ್ತಿದ್ದೆವು. ಅವರಿಗೆ ನೀರು ಕುಡಿಯದಿರಲು ಹಾಗೂ ಕೈ ಕಾಲುಗಳನ್ನು ಯಾವ ಲಯದಲ್ಲಿ ಆಡಿಸಬೇಕು ಎಂದು ಹೇಳಿ ಧೈರ್ಯ ತುಂಬುತ್ತಿದ್ದೆ. ನಾನು ಮುಳುಗು ತಜ್ಞನಾಗಿ ಬಾವಿಯಲ್ಲಿ   ಬಿದ್ದಿರುವ ತಂಬಿಗೆ, ಕೊಡ ಇತ್ಯಾದಿ ಗಳನ್ನು  ಎತ್ತಿ ಕೊಡುತ್ತಿದ್ದೆ. ಇನ್ನೂ, ದೀಪಾವಳಿಯ ಎಲ್ಲರ ಮನೆಯಲ್ಲಿನ ಆರತಿ, ಗೌರಿ ಪೂಜೆಯನಂತರದ ಸಿಹಿ ಪ್ರಸಾದ, ಅಃತಕರಣವೇ ಮೂರ್ತಿವೆತ್ತ  ಪಿಕಳಿಹಾಳ್ ಪದ್ದಕ್ಕ, ಗುಡಿ ಅಚ್ಚಕ್ಕ, ರಾಮ ಭಟ್ರ ರಂಗಕ್ಕ, ವೈನಿ, ಅಚ್ಚಂವತ್ತಿ ಹೀಗೆ ಹಲವಾರು ಹಿರಿಯ ಜೀವಗಳನ್ನು ಮರೆತೆನೆಂದರೂ ಮರೆಲಾರೆ.

ಶಿಳ್ಳಿ

ಶಿಳ್ಳಿ:

ನೀವ್ ಕಬೂಲ್ ಆಗ್ರಿ ಬಿಡ್ರಿ ನಾ ಬಿಡಾಂವ ಅಲ್ಲ. ಒಂದ ಸಿನಿಮಾನ, ನಾಟಕಾನ, ಹಾಡಾ, ನೃತ್ಯನಾ ಯಾವದಾ ಇರಲಿ ಅದರಾಗ ನವರಂಗ ತುಂಬೂದು ಪ್ರೇಕ್ಷಕರ ಹೃದಯಾಂತರಾಳದ ಪ್ರೋತ್ಸಾಹ ಹೊರಗ ಬರೂದ ಸೀಟಿ ಮೂಲಕ. ನೀವು ಅನೌನ್ಸ್ ಮಾಡಿ ಚಪ್ಪಾಳಿ ಗಿಟ್ಸಿಸ್ಕೋಬಹ್ದು,,,,ಆದರಾ ಸಿಳ್ಳಿನ ಖಂಡಿನ ಅಲ್ಲ. ನನಗ ಇಷ್ಟರಾಗ ೫೮ ತುಂಬ್ತಾವ. ಇಷ್ಟ ವಯಸ್ಸಾದ್ರು ಸೀಟಿ ಶಬ್ದದ ಉಂಟು ಮಾಡುವ ಕಂಪನದ ಆನಂದ ಅನುಭವಿಸ್ಲಿಕ್ಕೇನೆ ಸಿನಿಮಾಕ್ಕ, ನಾಟಕಕ್ಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕ ಹೋಗ್ತಿರ್ತೀನಿ.ನನಗ ಸೀಟಿ ಹೋಡಿಯೋದಕ್ಕ ಬರಾಣಿಲ್ಲ. ಆ ಒಂದ ಸೀಟಿ ಸಲುವಾಗಿ ಚಡಪಡಸ್ತೀನಿ. ಒಂದು, ಅದರ ಹಿಂದ ಇನ್ನೊಂದು, ಮಗದೊಂದು ಸೀಟಿಗಳು ಬಂದು ಜೊತಿಗಿ ಚಪ್ಪಾಳಿ ಬಿದ್ರನಾ ಮೈ ನವಿರೇಳ್ತದ. ನಮ್ಮ ವಯಸ್ಸನ ಕಡಿಮೆ ಮಾಡೂ ಶಕ್ತಿ ಈ ಸೀಟಿಗಿ ಅದಾ. ಸಣ್ಣಾಂವ ಇದ್ದಾಗ, ರಾಜ್ಕುಮಾರ್ ಸಿನಿಮಾಕ್ಕ ಅದು ಹ್ಯಂಗೋ ರೊಕ್ಕ ಹೊಂದ್ಸಿಗೊಂಡು first day first showಕ್ಕನಾ ಹಾಜರ. ಅಣ್ಣಾವ್ರು ಆ ಸಿನಿಮಾದಲ್ಲಿ ಮೊದ್ಲನೆ ಸರ್ತಿ ತೆರೆ ಮ್ಯಾಲ ಬರುವಾಗ  ಸೀಟಿ ಸಂಭ್ರಮ ತಾರಕದಲ್ಲಿರುತಿತ್ತು. ನಾ ಸೀಟಿ ಹೊಡೆಂವ ಅಲ್ಲದ ಕಾರಣ, ಒಂದು ಪುಗ್ಗಾ ಕ(Balloon)ಗಾಳಿ ಊದಿ ಫಟ್ ಅಂತ ಒಡಿತಿದ್ದೆ.  ನನ್ತರ, ಪುಗ್ಗಾ ವೀರರು ಭಾಳ ಇರ್ತಿದ್ರು. ಈ ಬಲೂನ ಒಡೆಯುವಾಗಿನ ಶಬ್ದ ಜೊತಿಗಿ ಸೀಟಿಗಳು ತರೋ ಆನಂದ ಈಗ ಎಷ್ಟ ರೊಕ್ಕ ಕೊಟ್ರು ಸಿಗೂದಿಲ್ಲ ಬಿಡ್ರಿ.

೧೯೭೭

1977

ಅವು ೧೯೭೭ರ ಕಾಲಘಟ್ಟದ ದಿನಗಳು. ೧೦ನೆ ಇಯತ್ತೆಯಲ್ಲಿ  ೨ನೆ ದರ್ಜೆಯಲ್ಲಿ ನಾನು ಉತ್ತೀರ್ಣನಾಗಿ ಅಪ್ಪ ಅಮ್ಮ ಸಂತಸದ ಕಡಲಲ್ಲಿ ತೇಲಿದ್ದರು. ಜೊತೆಗೆ ಗಣಿತದಲ್ಲಿ ೧೦೦ಕ್ಕೆ ೭೫ ಅಂಕ ಗಳಿಸಿ 'ಶ್ಯಾಣ್ಯಾ' ಎಂಬ ಗರಿ ಬೇರೆ ನನ್ತಲೆಗೇರಿತ್ತು.ಅಪ್ಪ  ಅವರು ಶಾಲಾ ಮಾಸ್ತರ. ದುಡಿಯುವ ಕೈ ಎರಡು. ೫ ಮಕ್ಕಳ ತುಂಬು ಸಂಸಾರ. ಬರುವ ಪಗಾರದಲ್ಲಿ ನಮ್ಮೆಲ್ಲರ ತುತ್ತಿನ ಚೀಲ ತುಂಬಿಸುತ್ತಿದ್ದ ಅಮ್ಮನ ಚಾಣಾಕ್ಷ ಮತಿಗೆ ಜೈ ಅನ್ನಲೇ ಬೇಕು. ಅಪ್ಪನ ಆರ್ಥಿಕ ಹೊಣೆಗಾರಿಕೆಗೆ ಹೆಗಲು ಕೊಡುವ ಉದ್ದೇಶದಿಂದ ನಾನು ನನ್ನ ಇಷ್ಟದ ಬ್ಯಾಂಕ್ ನೌಕರಿಯ ಆಸೆಗೆ ತಿಲಾಂಜಲಿ ಇಟ್ಟು ಬೇಗನೆ ನೌಕರಿ ಸಿಗುವ Diploma in Civil Engg ಆಯ್ಕೆ ಮಾಡಿ ಕೊಂಡಿದ್ದೆ. ಸರಕಾರಿ ಕೋಟಾದಡಿಯೇ ಸೀಟು ಸಹ ಸರಕಾರಿ ಪಾಲಿಟೆಕ್ನಿಕ್ ರಾಯಚೂರಿನಲ್ಲಿ ಸಿಕ್ಕಿತ್ತು. ಪ್ರಾತಃಸ್ಮರಣೀಯರಾದ ಪೇಜಾವರ ಶ್ರೀ ಗಳು ಸ್ಥಾಪಿಸಿದ ರಾಯಚೂರಿನ ಮಧ್ವಮಂಡಲದಲ್ಲಿ ನನ್ನ ವಾಸದ ಹಾಗೂ ಊಟದ ವ್ಯವಸ್ಥೆಯನ್ನು ಅಪ್ಪ ಮಾಡಿದ್ದರು. ಮೊದಲ ಸಲ ಅಪ್ಪ ಅಮ್ಮರಿಂದ ಅಗಲಿ ಮಸ್ಕಿಯಿಂದ ರಾಯಚೂರು ಗೆ ನಾನು ಹೋಗುವ ದಿನದಂದು ಅಮ್ಮನ ಬಟ್ಟುಲು ಕಣ್ಣುಗಳಿಂದ ಅಶ್ರುಧಾರೆಗೆ ಬಿಡುವೇ ಇರಲಿಲ್ಲ. ಅಪ್ಪನ ಅಕ್ಷಿಗಳಲ್ಲೂ ಕಣ್ಣಿರ ಧಾರೆ. ಇನ್ನೂ, ನಾನಂತೂ, ರಾಯಚೂರುಗೆ ಹೊರಡುವ ದಿನದಂದು ಅತ್ತು ಅತ್ತು ಬಸವಳಿದಿದ್ದೆ. ಭಾರವಾದ ಹೃದಯದಿಂದ ಮಸ್ಕಿ ಯಿಂದ ರಾಯಚೂರಿಗೆ ಬಂದಿದ್ದೆ.  ಮೊದಲನೆ ದಿನ ಏನೋ ಕಾತರ. ಹೊಸ ಪರಿಸರ, ಹೊಸ ಸ್ನೇಹಿತರು ಮನ ಪುಳಕಗೊಂಡಿತ್ತು. ಕ್ಲಾಸ್ ಮುಗಿಸಿಕೊಂಡು ಮಧ್ಯಾನ್ಹ ಊಟಕ್ಕೆ ಬಂದಾಗ ಸಮಸ್ಯೆ ಶುರು ಆಯಿತು. ಅಮ್ಮನ ಕೈಯ ರುಚಿಕರ ಮುದ್ದಿಪಲ್ಯ, ಭಕ್ರಿ, ಕಡುಬು, ಗಿಲಗಂಚಿ, ಬೆಸನ್ ಉಂಡಿ ಮಂಡಾಳ ಓಗ್ಗರಣಿ, ಥಾಲಿಪಟ್ಟು ಇತ್ಯಾದಿಗಳನ್ನು ತಿಂದಿದ್ದ ನನ್ನ ಮನ ಮಧ್ವ ಮಂಡಳದ ಊಟವನ್ನು ಒಪ್ಪಲೇ ಇಲ್ಲ. ಅಳು ತಡೆಯಲಾಗಲಿಲ್ಲ, ಅಳುತ್ತಲೇ ಇದ್ದ ನನ್ನನ್ನು ಮೇನೆಜರ ದಿವಾನಜಿ ಅವರು ಬೆನ್ನ ಮೇಲೆ ಕೈಯಾಡಿಸಿ ಸಂತೈಸಿದರೂ ಊಟ ಸೇರಿರಲಿಲ್ಲ. ರಾಯಚೂರಿನಲ್ಲಿಯೇ ಇದ್ದ ನನ್ನ ಸೋದರತ್ತೆ(ಅಪ್ಪನ ಅಕ್ಕ)ಕಮಲವ್ವನ ಮನೆಗೆ ಹೋಗಿ ಹೊಟ್ಟೆ ತುಂಬಾ ತಿಂದಿದ್ದೆ. ಅಪ್ಪ ಅಮ್ಮಾ ನನ್ನ ಕಷ್ಟ ನೋಡಲಾರದೆ, ಕೊನೆಗೆ ರಾಯಚೂರಿನಲ್ಲಿಯೇ ಮನೆ ಮಾಡಿದರು. ಇದರಿಂದಾಗಿ ಅಮ್ಮ ರುಚಿಕರ ಊಟ ಪುನಃ ನನಗೆ ಲಭಿಸುವಂತಾಗಿತ್ತು. ಅವರ ಪ್ರೀತಿಗೆ ಸಾಟಿಯೇ ಇಲ್ಲ. ನಾವು ೫ ಜನ ಅವರ ಆರ್ಶಿವಾದದಿಂದ ಸರಕಾರಿ ನೌಕರಿ(ಕೊನೆ ತಮ್ಮ ವಿದೇಶದಲ್ಲಿದ್ದಾನೆ) ಪಡೆದುಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ. ನಮ್ಮ ಏಳ್ಗೆಯನ್ನು ನೋಡಿ ಸಂತಸ ಪಡುವ ಭಾಗ್ಯ ಅಪ್ಪ ಅಮ್ಮನಿಗಿರಲಿಲ್ಲ. ೧೯೯೧ರಲ್ಲಿ ಅಪ್ಪ ,೧೯೯೫ರಲ್ಲಿ ಅಮ್ಮಾ ಶ್ರೀ ಹರಿಯ ಪಾದ ಸೇರಿಕೊಂಡು ಅಲ್ಲಿಂದಲೇ ನಮ್ಮನ್ನು ಹರಸುತ್ತಿದ್ದಾರೆ. ಮೊಂಬತ್ತಿಯ ಹಾಗೆ ನಮ್ಮ ಬದುಕನ್ನು ಬೆಳಕು ಮಾಡಿದ ಅಪ್ಪ ಅಮ್ಮ ಏಳು ಜನ್ಮಕ್ಕೂ ಇವರೇ ನನ್ನ ಜನ್ಮದಾತರಾಗಲಿ ಎನ್ನುವುದೇ  ನಮ್ಮ ಆಶಯ.

ಸೀತಕ್ಕ

ಸೀತಕ್ಕ


ಹಿರಿಯರಿಗೆ ಸೀತಿ,ಸಮಕಾಲೀನ ಗೆಳತಿಯರಿಗೆ ಸೀತಾ, ಕಿರಿಯರಿಗೆ ಸೀತಕ್ಕ ಎಂದೆ ಕರೆಸಿಕೊಳ್ಳುತ್ತಿದ್ದ ನನ್ನ ಜನನಿ ಸೀತಾಬಾಯಿಯ ಕತೆ ಇದು. ವೈದೀಕ ಬ್ರಾಹ್ಮಣ ಮನೆತನದಲ್ಲಿ ಜನ್ಮ ತಾಳಿದ ನಮ್ಮ ಅಮ್ಮ ಸ್ವಬಾವತಃ ಸಂಪ್ರದಾಯ ಕಟ್ಟುಪಾಡುಗಳಿಗೆ ಜೋತು ಬಿದ್ದೆ ಬೆಳೆದವರು. ಮುದಗಲ್ ನ ಭೀಮಭಟ್ಟ-ಪದ್ದಕ್ಕ ದಂಪತಿಗಳ ಎರಡನೆ ಮಗಳಾದ ನಮ್ಮ ಅಮ್ಮ ಓದಿದ್ದು ಎಂಟನೆ ತರಗತಿ ಮಾತ್ರ. ಆದರೆ, ಸದಾ ಓದುವ ಹವ್ಯಾಸ. ನನ್ನಲ್ಲಿ ಓದುವ ಗೀಳು ಬಂದಿದ್ದೆ ಅಮ್ಮನಿಂದ. ನನ್ನ ಬರವಣಿಗೆ ಗೆ ಅಪ್ಪನೆ ಕಾರಣ.  ಸಿಂಧನೂರಿನಲ್ಲಿ ಸರಕಾರಿ ಶಾಲಾ ಮಾಸ್ತರ್ ಹುದ್ದೆಯಲ್ಲಿದ್ದ ಮುದಗಲ್ ರಾಘವೇಂದ್ರ ರಾವ್ ಅವರೊಡನೆ ವಿವಾಹ. ಲಗ್ನಕ್ಕೂ ಮೊದಲು ನಮ್ಮ ಅಜ್ಜಿ(ತಂದೆಯ ತಾಯಿ)ಅವರ ಇದ್ದ ಒಂದೆ ೫ ಎಕರೆ ಹೊಲವನ್ನು ನಮ್ಮ ತಾತಾ ಭೀಮಭಟ್ಟರಿಗೆ ಏನೋ ತಾಪತ್ರಯದ ಕಾರಣ ಒತ್ತಿ ಇಟ್ಟಿದ್ದರು.  ನಮ್ಮ ತಾತಾ, ಅದೆ ಹೊಲವನ್ನು ವರೋಪಚಾರ ಎಂದು ನಮ್ಮ ತಂದೆಯವರಿಗೆ   ಮರಳಿಸಿದ್ದರು. ಈ ಹೊಲದ ಮೇಲೆ ನಮ್ಮ ತಂದೆಯವರಿಗೆ ಬಲು ಪ್ರೀತಿ.ಮುದಗಲ್ ಗೆ ಬಂದಾದಲೆಲ್ಲ ಅವರ ಮೊದಲ ಭೇಟಿ ಹೊಲಕ್ಕೆ. ಅಲ್ಲಿದ್ದ, ಚಂದ್ರ ಮಾವು, ಹೋಳಿಗೆ ಮಾವಿನ ಗಿಡಗಳ ನೆರಳಲ್ಲಿ ವಿರಮಿಸಿ ಬರುತ್ತಿದ್ದರು. ವಿಷಯ ಸೀತಕ್ಕನ್ನ ಬಿಟ್ಟು ಎಲ್ಲೊ ಹೋಗ್ತಾ ಇದೆ ಅಂತಾ  ಅನಸ್ತಿದಿಯಾ ವಾಚಕ ಮಹಾಶಯ.ನಮ್ಮ ತಂದೆ ರಾಘಪ್ಪನ ಉಲ್ಲೇಖವಿಲ್ಲದೆ ಸೀತಕ್ಕನ ಕಥೆ ಅಪೂರ್ಣವಾಗುತ್ತದೆ. ವಿಷಯಾಂತರ ಎಂದು ಖಂಡಿತ ಭಾವಿಸ ಬೇಡಿ. ಈ ಸೀತಕ್ಕ, ಮಮತೆ ಅಃತಕರಣಕ್ಕೆ ಇನ್ನೊಂದು ಹೆಸರು. ಮುದಗಲ್ ನಲ್ಲಿ ನಮ್ಮಮ್ಮ ಹಾಕುವ ಒಗಟುಗಳಿಗೆ ಭಾರಿ ಫರಮಾಯಿಷಿ. ಅದರಲ್ಲೂ, ದಶಾವತಾರದ ಕಥೆ ಹೇಳಿ ಗಂಡನ ಹೆಸರನ್ನು ಹೇಳುವ ಒಗಟಿಗೆ ಭಾರಿ ಬೇಡಿಕೆ ಇತ್ತು. ಮದುವೆ, ಮುಂಜಿಗಳಲ್ಲಿ ನಮ್ಮಮ್ಮ ಯಾವಾಗಲೂ ಮುಂದು.  ರುಕ್ಕೋತ,ಸುರಗಿ, ಲಡ್ಡಿಗಿ ಭೂಮ ಹೀಗೆ ಮದುವೆಯ ಎಲ್ಲ ವಿಧಿ ವಿಧಾನಗಳನ್ನು ಅತ್ಯಂತ ಕ್ಷಮತೆಯಿಂದ ಯಾವುದೇ ಲೋಪವಿಲ್ಲದೆ ನಮ್ಮಮ್ಮ ನಿರ್ವಹಿಸುತ್ತಿದ್ದರು. ಹಾಡು ಹಸೆಯಲ್ಲೂ ಅಮ್ಮನದ್ದು ಎತ್ತಿದ ಕೈ. ಸದಾ ಧುಮ್ಮಿಕ್ಕುವ ಧಾವಂತದ ಕಣ್ಣಿರು ತುಂಬಿದ ಬಟ್ಟಲು ಕಂಗಳು, ಮುಖಕ್ಕೆ ಢಾಳಾದ ಕುಂಕುಮ ಆಗಾಗ ಕಚ್ಚಿ ಹಾಕಿ ಉಟ್ಟಿರುತ್ತಿದ್ದ ಸೀರೆಯಿಂದ ಅಮ್ಮನಿಗೆ ದೈವಿ ಕಳೆ ಇರುತ್ತಿತ್ತು. ನಮಗೆ ಓದು-ಬರಹ ಕರಗತವಾಗುವಲ್ಲಿ ಅಮ್ಮನ ಹೊಡೆತಗಳೆ ಕಾರಣ. ಹೊಡೆತದ ನಂತರ ತಬ್ಬಿಕೊಂಡು ಸಂತೈಸಿ ಕೊಬ್ಬರಿ-ಬೆಲ್ಲ ಕೊಟ್ಟು ' ನೀವು ಅನ್ನಕ್ಕ ಹತ್ತಲಿ ಅಂತ ನಾ ಹೊಡಿತೀನಿ' ಎನ್ನವುದು ಅವರ ನಿಲುವು. ಅಪ್ಪ ನಿಂದ ಹೊಡೆತ,,,,ಸಾಧ್ಯವೆ ಇಲ್ಲ. ಅವರ ಒಲವು ಧುಮ್ಮಿಕ್ಕುವ ಜಲಪಾತದಂತೆ. ಬಾಯಲ್ಲಿ ತಂಬಾಕು ಹಾಕಿಕೊಂಡು ಆನಂದಲ್ಲಿರುವಾಗ  ನಮ್ಮ ಚಿಲ್ಲರೆ ಹಣದ ಅವಶ್ಯಕತೆ ಈಡೇರಿಕೊಳ್ಳುವ ಕಲೆ ನಮಗೂ ದತ್ತವಾಗಿತ್ತು.ಬೈಯಲು ಬಾಯಿ ತೆರದರೆ ರಸ ಒಸರುವ ಸಾಧ್ಯತೆ ಇರುವ ಕಾರಣ, ಅಪ್ಪ ಜಾಸ್ತಿ ಕಾಡಿಸಿಕೊಳ್ಳದೆ ನಮ್ಮ  ಹಣದ ಬೇಡಿಕೆಗೆ ಅಸ್ತು ಎನ್ನುತ್ತಿದ್ದರು. ಶಾಲಾ ಮಾಸ್ತರಿಕೆಯ ಅಲ್ಪ ಪಗಾರದಲ್ಲಿ ೫ ಮಕ್ಕಳ ಸಂಸಾರವನ್ನು ನಿಭಾಯಿಸುತ್ತಿದ್ದ ಸೀತಕ್ಕ ಯಾವ ಆರ್ಥಿಕ ತಜ್ಞರಿಗೂ ಕಡಿಮೆ ಇರಲಿಲ್ಲ. ಹಳ್ಳಿಯ ವಾತಾವರಣದ ಕಾರಣ, ದುಂದು ವೆಚ್ಚದ ಹವ್ಯಾಸ ಅವರಿಗಿರಲಿಲ್ಲ. ಮುದಗಲ್ ನ ಅಮರ ಟಾಕೀಸಿನಲ್ಲಿ ಸಿನಿಮಾಕ್ಕೆ ಹೋಗುವಾಗ, ನನ್ನನ್ನು ಹಾಗೂ ತಮ್ಮ ಪ್ರಹ್ಲಾದನನ್ನು ಎರಡೂ ಭುಜದ ಮೇಲೆ ಮಲಗಿಸಿ ಕೊಂಡು ಒಂದೆ ಟಿಕೆಟ್‌ ನಲ್ಲಿ ಮೂವರಿಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದರು. ಸಿನಿಮಾಕ್ಕೆ ಹೋಗಲಿರುವ ಸೂಚನೆ ಮಧ್ಯಾನ್ಹ ವೆ ನಮಗೆ ಸಿಗುತ್ತಿತ್ತು. ಅಂದಿನ ಆ ಖುಷಿ ಇಂದು ಸಿಗುವುದು ಸಾಧ್ಯವಿಲ್ಲ. ಅಪ್ಪನದ್ದು ಸರಕಾರಿ ನೌಕರಿಯ ಕಾರಣ ವರ್ಗಾವಣೆ ಇರುತ್ತಿತ್ತು. ನಮ್ಮಗಳ ಶಿಕ್ಷಣಕ್ಕಾಗಿ ಕೆಲ ವರ್ಷ ಮುದಗಲ್ ನಲ್ಲಿಯೇ ನಮ್ಮ ವಾಸ. ಅಪ್ಪ ಒಬ್ಬರೆ ನೌಕರಿಯ ಸ್ಥಳದಲ್ಲಿ ವಾಸಿಸುತ್ತಿದ್ದರು. ದಸರಿ, ದೀಪಾವಳಿಯ ದಿನಗಳಲ್ಲಿ ಅಮ್ಮನಿಗೆ ನಮ್ಮ ಕಾಟ ಅಷ್ಟಿಷ್ಟಲ್ಲ. ಅಪ್ಪಾ ಯಾವಗ ಬರ್ತಾರ, ಇನ್ನಾ ಯಾಕ ಬಂದಿಲ್ಲ, ಹೊಸ ಬಟ್ಟಿ ಯಾವಾಗ ಕೊಡಸ್ತಾರ, ಹೀಗೆ ಹಟ ಇರುತ್ತಿತ್ತು. ಹಬ್ಬದ ಹಿಂದಿನ ದಿನ  ಅಪ್ಪ ಬರಲಿಲ್ಲ ಎಂಬ ಬೇಸರದಲ್ಲಿಯೇ ನಿದ್ರೆಗೆ ಶರಣಾಗುತ್ತಿದ್ದೇವು. ಅಪ್ಪನ ಮೇಲೆ ನನಗೆ ವಿಶೇಷ ಪ್ರೀತಿ. ಅದ್ಹೇಗೊ ನಿದ್ರೆಯನ್ನು ನಿಯಂತ್ರಿಸಿ ಅಪ್ಪನ ಬರುವ ಕ್ಷಣಗಳಿಗೆ ಕಾದು, ಅವರು ಬಂದ ತಕ್ಷಣ ಅಪ್ಪಾ ಎಂದು ಕೂಗುತ್ತ ನನ್ಗೇನು ತಂದಿ ಎನ್ನತ್ತು ಅವರನ್ನ ಅಪ್ಪಿಕೊಳ್ಳುತ್ತಿದ್ದೆ. ಕೆಲವೊಮ್ಮೆ, ನಿದ್ರೆಗೆ ಶರಣಾಗಿ, ಯಾವಾಗಲೊ ಎಚ್ಚರವಾದಾಗ, ಊರಿಗೆ ಬಂದು ಮಲಗಿದ್ದ ಅಪ್ಪನ ಕೆನ್ನೆಯನ್ನು ಮುಟ್ಟಿ ಓ ಇದು ಕನಸಲ್ಲ,,,,,ಅಪ್ಪ ಬಂದಿದ್ದಾರೆ  ಎಂಬ ಖುಷಿಯಲ್ಲಿ ನಿದಿರಾ ದೇವಿಗೆ ಶರಣಾಗುತ್ತಿದ್ದೆ. ಸೀತಕ್ಕ, ಕಸಬಾ ಲಿಂಗ್ಸೂರಿನ ಶ್ರೀ ವರದೇಂದ್ರರ ಆರಾಧನೆ ಮತ್ತು ಶ್ರೀ ಕುಪ್ಪೆರಾಯನ ಜಾತ್ರಿ ತಪ್ಪಿಸುತ್ತಿರಲಿಲ್ಲ. ಸ್ವಲ್ಪ ನಾಸ್ತಿಕನಾಗಿದ್ದ ಅಪ್ಪ ಖರ್ಚಿನ ಈ ಬಾಬತ್ತಿ ಗಾಗಿ ಅಮ್ಮನೊಡನೆ ಮನಸ್ತಾಪ ಆಗುತ್ತಿತ್ತು. ಗೆಲುವು  ಸದಾ ಅಮ್ಮದ್ದಾಗಿರುತ್ತಿತ್ತು. ಎಲ್ಲ ಮಕ್ಕಳನ್ನು ಕಟ್ಟಿಕೊಂಡು ಅಮ್ಮನ ಈ ಯಾತ್ರೆ ಯಶಸ್ವಿಯಾಗಿ ಮುಗಿಯುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆನಂತೆ. ಅಗಸಿ ಹತ್ತಿರದಿಂದಲೇ   ನನ್ನ ಅಳು ದನಿ ಕೇಳಿದ ಹನುಮಣ್ಣ(ಅಮ್ಮನ ಸೋದರ ಮಾವ) ಸೀತಿ ಬಂದ್ಲು ಎಂದು ಘೋಷಣೆ ಮಾಡುತ್ತಿದ್ದನಂತೆ.  ಮುದಗಲ್ ಮೊಹರಮ್ ದಿನಗಳಲ್ಲಿ , ಕೆಂಪು ಸಕ್ಕರಿ ಅರ್ಪಿಸುವುದನ್ನು ಅಮ್ಮ ಮರೆಯುತ್ತಿರಲಿಲ್ಲ. ಮೊಹರಮ್ ಕೊನೆ ದಿನದ ದೇವರುಗಳ ಮೆರವಣಿಗೆ, ಲಯಬದ್ಧ ನಗಾರಿ ಶಬ್ದ ಇನ್ನೂ ನಾನು ಮರೆತಿಲ್ಲ. ಸೀತಕ್ಕ ನಿಗೆ ಸ್ವಂತ ಮನೆಯ ಆಸೆ ಬಹಳಿತ್ತು. ಆದರೆ, ವಿಧಿಯಾಟ ಬೇರೆನೆ ಇತ್ತು. ೧೯೯೧ ರಲ್ಲಿ ಅಪ್ಪ ,೧೯೯೫ ಲ್ಲಿ ಅಮ್ಮಾ ಶ್ರೀ ಹರಿಯ ಪಾದ ಸೇರಿದರು. ನಾವು ೫ ಜನ ಮಕ್ಕಳು ಸ್ವಂತ ಮನೆ ಯಲ್ಲಿದ್ದೇವೆ. ಆದರೆ, ನೋಡಿ ಖುಷಿ ಪಡುವ ಅಪ್ಪ ,ಅಮ್ಮ ಇಲ್ಲ ಅಷ್ಟೇ. ಮೊಂಬತ್ತಿಯ ಹಾಗೆ ಕರಗಿ ನಮ್ಮೆಲ್ಲರ ಬಾಳನ್ನು ಬೆಳಗಿದ ಅಪ್ಪಾ ಅಮ್ಮ, ಸೀತಕ್ಕ-ರಾಘಪ್ಪ ನಮಗೆ ಪ್ರಾತಃಸ್ಮರಣೀಯರು.

ಮಂಡಾಳುಂಡಿ

ಮಂಡಾಳುಂಡಿ

ಕ್ಷಮಿಸಿ ವಾಚಕ ಮಹಾಶಯರೆ. ಪುನಃ ನಿಮ್ಮನ್ನು ೭೦ರ ದಶಕದ ಮುದಗಲ್ ನಲ್ಲಿ ಕಳೆದ ಜೀವನದತ್ತ ಕರೆದುಕೊಂಡು ಹೋಗುವ ಇರಾದೆ ನನ್ನದು. ಎಂದಿನಂತೆ ನಿಮ್ಮ ಸಮ್ಮತಿಯಿದೆ ಎಂದು ಭಾವಿಸುತ್ತಾ,,,,,,ಬನ್ನಿ ಈಗ ಮುದಗಲ್ ಗೆ ಹೋಗುವಾ. ಅದು ೧೯೭೦ರ ಮುದಗಲ್. ಸಣ್ಣ ಊರೆಂದರೂ ಅಕ್ಕ ಪಕ್ಕದ ಹಳ್ಳಿಗಳಿಗೆ ಈ ಊರೇ ದೊಡ್ಡ ಪಟ್ಟಣ. ಆಗ, ತಾಲೂಕು ಕೇಂದ್ರ ಲಿಂಗ್ಸೂರಿಗಿಂತಲೂ ದೊಡ್ಡದಿತ್ತು. ನಮ್ಮೂರಿನಲ್ಲಿ ಸೋಮವಾ ಸಂತೆ ನೆರೆದಿರುತಿತ್ತು. ಹಳ್ಳಿಯವರು ಬಂದು ವ್ಯಾಪಾರ ಮಾಡಿ ತಮ್ಮ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳುತ್ತಿದ್ದರು. ಬೆಣ್ಣೆಯನ್ನು ನಮ್ಮೆದುರೆ ಕಾಸಿ ತುಪ್ಪವನ್ನು ವರ್ತನೆ ಮನೆಗಳಿಗೆ ಮಾರುತ್ತಿದ್ದರು. ಗಟ್ಟಿಯಾದ ಬೆಣ್ಣೆ ತುಪ್ಪವಾಗಿ ರೂಪಾಂತರ ಗೊಳ್ಳುವಾಗ ವಿಳೆಯದೆಲೆ ಹಾಕಿ ತುಪ್ಪದ ವಾಸನೆ ಘಂ ಎನ್ನುವಂತೆ ಮಾಡುತ್ತಿದ್ದರು. ತುಪ್ಪದಲ್ಲಿ ಮುಳಗು ಹಾಕಿದ ವಿಳೆದೆಲೆ ತಿನ್ನಲು ನಮ್ಮಲ್ಲಿ ಭಾರಿ ಪೈಪೋಟಿ ಇರುತ್ತಿತ್ತು.  ಇರಲಿ, ಸಂತೆ ಎಂದನಲ್ಲ, ಅಂದು ಜೇಜಿ ಯಂಕಣ್ಣನ ಅಂಗಡಿಯಲ್ಲಿ ಲಭಿಸುವ ಮಂಡಾಳುಂಡಿ ತಿನ್ಮುವುದು ನನ್ನ ಗುರಿ.ಮಂಡಾಳನ್ನು ಬೆಲ್ಲದ ಪಾಕದಲ್ಲಿ ಒಂದು ಹದಕ್ಕೆ ಬಂದಾಗ ಕಲೆಸಿ ಉಂಡಿ ಮಾಡಿರುತ್ತಿದ್ದರು. ನೋಡಲು ದೊಡ್ಡದಾಗಿ ಕಂಡರೂ, ಬಹಳ ಹಗುರವಿರುವ ಉಂಡಿ ತಿನ್ನುವಾಗಿನ ಆನಂದ ಈಗಿನ ಯಾವ ಸಿಹಿ ತಿಂಡಿಗೂ ಸಾಟಿ ಇಲ್ಲ ಬಿಡಿ. ನಮಗೆ ಸಂತಿ  ರೊಕ್ಕ ಅಂತಾ ೧೦ ಪೈಸೆ ನಮ್ಮ ಮುತ್ಯಾ ಭೀಮ್ ಭಟ್ ಕೊಡುತ್ತಿದ್ದರು.ಅದರ ಸಂಪಾದನೆಯೇ ಅಂದಿನ ನಮ್ಮ ಧ್ಯೇಯ ವಾಗಿರುತ್ತಿತ್ತು. ಒಂದೆರಡು ತಾಸು 'ಸಂತಿ ರೊಕ್ಕ ' ಎಂದು ಕೂಗುತ್ತಾ ಕಾಡಿ ಬೇಡಿದ ನಂತರ ೧೦ ಪೈಸೆ ನಮ್ಮ ಕೈಗೆ ಬೀಳುತ್ತಿದ್ದ ಆ ಘಳಿಗೆಯ ಸಂತಸ ಹೇಳಲು ಶಬ್ದಗಳು ಸಾಲವು. ಹೀಗೆ ಲಭಿಸಿದ ಹಣ ದಿಂದ ೨ಪೈಸೆ ಗೆ ಒಂದರಂತೆ ೫ ಮಂಡಾಳುಂಡಿಗಳನ್ನು ಉದರಕ್ಕೆ ಸೇರಿಸಿ ಕೃತಾರ್ಥನಾಗುತ್ತಿದ್ದೆ. ಮುದಗಲ್ ನ ಮನೆಗೆ ನೆಂಟರು ಬಂದು ಊರಿಗೆ ಹೊರಡುವಾಗ ಅವರಿಗೆ ನಮಸ್ಕರಿಸಿ ೧೦ ಪೈಸೆಯಿಂದ ಎರಡು ಪಾವಲಿ(೫೦ ಪೈಸೆ)ಯವರೆಗೆ ಸಂಪಾದಿಸುವ ಕಲೆ ಕರಗತ ವಾಗಿತ್ತು. ಉಂಡಿ ತಿನ್ನುವುದು ಬೇಡವೆನಿಸಿದಾಗ. ಬಸ್ ಸ್ಟಾಂಡ್ಯನಲ್ಲಿನ ಲಿಂಬುಳಿ ಪೆಪ್ಪರ್ ಮೆಂಟ ನಮ್ಮ ಎರಡನೆ ಆಯ್ಕೆ ಯಾಗಿರುತ್ತಿತ್ತು.  ಹೊತ್ಯು ಮೀರಿದ ಸಮಯದಲ್ಲಿ ನಮ್ಮ ಮನೆಯ ಮಸಾಲಾ ಪದಾರ್ಥಗಳಿಗಾಗಿ ಜುಟ್ಲ ರಾಮಣ್ಣನ ಮನೆ:ಅಂಗಡಿ  ಸದಾ ಸಿದ್ಧವಿರುತ್ತಿತ್ತು. ಸ್ವಲ್ಪ ಮುಂದೆ ಸಾಗಿದರೆ, ಕೊಡೆಕಲ್ ಬಸಣ್ಣನ ಅಂಗಡಿ. ಹಾಗೆ ಮುಂದೆ ಸಾಗಿದರೆ ಕಿರಾಣಾ ಬಝಾರನಲ್ಲಿ ಯಾಲಕ್ಕಿ ಬಸಪ್ಪ, ತಾವಗೇರೆ ಯಂಕಣ್ಣ, ಬಾಳಪ್ಪ, ಸೀನಪ್ಪ ಹೀಗೆ ಅಂಗಡಿಗಳ ಸಾಲೆ ಇದ್ದವು. ಅವರೆಲ್ಲರು ನನ್ನನ್ನು ಆಚಾರ್ಯ ಎಂದು ಕರೆಯುತ್ತಿದ್ದರು. ಮದುವೆ ಮುಂಜಿಗಳಲ್ಲಿ ನಾನು ನಮ್ಮ ಮುತ್ಯಾ ಅವರರೊಂದಿಗೆ ಹೋಗಿರುತ್ತಿದ್ದೆ. ದಕ್ಷಿಣೆಯ ರೂಪದಲ್ಲಿ ಒಂದಷ್ಟು ಸಂಪಾದನೆಯೂ ಇರುತ್ತಿತ್ತು.  ಒಟ್ಟಿನಲ್ಲಿ, ಆ ದಿನಗಳ ಆತ್ಮೀಯತೆ ಇಂದಿನ ಕಾಲಮಾನದಲ್ಲಿ  ಕಾಣ ಸಿಗುವಿದು ವಿರಳ.

ಯಾತರ ಚೆಲುವಾನೇ,,,,,,,

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮದುವೆಯ ಹಿಂದಿನ ರಾತ್ರಿಯ ಕಾರ್ಯಕ್ರಮಗಳು ಬಲು ಸೊಗಸು. ಅದರಲ್ಲೂ ಬ್ರಾಹ್ಮಣರಲ್ಲಂತೂ ಕಳೆ  ಜಾಸ್ತಿಯೇ ಕಟ್ಟಿರುತ್ತದೆ. ಬೀಗರನ್ನು ಎದಿರಿಗೊಳ್ಳುವುದು, ವರ ಪೂಜೆ, ವಾಗ್ ನಿಶ್ಚಯ ಇತ್ಯಾದಿಗಳನ್ನೊಳಗೊಂಡ ಪ್ರಕ್ರೀಯೆ ಭೂಮದ  ಊಟದೊಂದಿಗೆ ಸಮಾಪ್ತಿಯಾಗುತ್ತದೆ. ಊಟದ ಸಮಯದಲ್ಲಿ ಉಭಯ ಪಕ್ಷದವರು   ವ್ಯಂಗಭರಿತ ಹಾಡುಗಳನ್ನು ಹಾಡುತ್ತಾ  ವಾತಾವರಣ ರಂಗೇರುವಂತೆ ಮಾಡುತ್ತಾರೆ. 'ಮಂಡಿಗೆ' ಇರದಿದ್ದಲ್ಲಿ ಜಗಳ ಶುರುವಾಗುತ್ತದೆ. ನಾನು ಹೇಳ ಹೊರಟಿರುವುದು ಹಾಡಿನಿಂದಾಗಿ ಹುಟ್ಟಿದ ಜಗಳದ ಪ್ರಸಂಗ. ಸುಮಾರು 40ವರ್ಷಗಳ ಹಿಂದೆ ಹುಲಿಹೈದರನ  ನಮ್ಮ  ದೊಡ್ಡಮ್ಮನ ಬಳಿ  ಹೋಗಿದ್ದೆ. ಅಲ್ಲೊಂದು ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿತ್ತು. ಭೂಮದ ಊಟದ ಆರಂಭದವರಗೆ ಎಲ್ಲಾ ಪ್ರಕ್ರೀಯೆ ಸಸೂತ್ರವಾಗಿ ಸಂಪನ್ನಗೊಂಡಿದ್ದವು. ಎಲ್ಲೆಲ್ಲೂ ಖುಷಿ ತುಂಬಿತ್ತು. ಊಟ ಆರಂಭವಾಯಿತು.ವರ ಮಹಾಶಯ ಕಪ್ಪಗಿದ್ದ. ಕನ್ಯಾ ಪಕ್ಷದ ಒಬ್ಬ ದಾಸಯ್ಯ ' ಕಪ್ಪು ರನ್ನೆ ಕರಿಯ ಮುಖದವ ಯಾತರ ಚೆಲುವನೆ' ಎಂದು ವರನ ಕಡೆ ಕೈ ತೋರುತ್ತ ಜೋರಾಗಿ ಹಾಡತೊಡಗಿದ.  ಇದು ಬೀಗಿತ್ತಿಯನ್ನ ಕೆರಳಿಸಿತು. 'ಎನ್ ಛಂದ ಹಾಡ್ಲಕತ್ತಿ ಸಾಕ ಮಾಡಪ್ಪ' ಅಂತಾ ಸಿಟ್ಟಿನಿಂದ ಹೇಳಿಯೇ ಬಿಟ್ಟರು. ಆದರೆ, ದಾಸಯ್ಯ ಕೇಳಬೇಕಲ್ಲ, ನಾನು ಕೃಷ್ಣನ ಬಗ್ಗೆ ಹಾಡ್ತಾ ಇದ್ದೇನೆ ನಿಮಗೇನು ತೊಂದರೆ' ಅಂತಾ ಹೇಳಿ ಇನ್ನೂ ತಾರಕ ಸ್ವರದಲ್ಲಿ ಮುಂದುವರೆಸಿದ. ಬೀಗಿತ್ತಿ ಕೆರಳಿದ ಸಿಂಹಿಣಿಯಾದರು. ವರ ಮಹಾಶಯನಿಗೆ ' ಎದರ ಇರೋ ಮಂಡಿಗಿ ಕಂಡಿದ್ಯಾ ಇಲ್ಲ,,,,ದಾಸಯ್ಯನ ಹಾಡು ನಿನ್ನ ಕಿವ್ಯಾಗ ಇಳಿದಿಲ್ಲೇನು' ಅನ್ನುತ್ತಾ ಎಬ್ಬಿಸಿಯೇ ಬಿಟ್ಟರು. ಪರಿಸ್ಥೀತಿ ಕೈ ಮೀರುತ್ತಿರುವುದನ್ನು ಅರಿತ  ಕನ್ಯಾಮಣಿಯ  ತಂದೆ, ತಾಯಿ ಕ್ಷಮೆ ಯಾಚಿಸುವುದರೊಂದಿಗೆ ಪ್ರಕರಣ ಸುಖಾಂತ್ಯವಾಯಿತು. ಈ ಘಟನೆ ಆಗಾಗ ನನ್ನ ಸೃತಿ ಪಟಲದಲ್ಲಿ ಹಾದು ಹೋಗುತ್ತಿರುತ್ತದೆ.

ಸೌಹಾದ೯ತೆಗೆ ಮುದಗಲ್ಲಣ್ಣ

ಸೌಹಾರ್ದತೆಗೆ ಮುದಗಲಣ್ಣ

ಪ್ರೊ.ಬಸವರಾಜ ಸಬರದ್ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಅದ್ಭುತವಾದ ಗೀತೆಯೊಂದನ್ನ ರಚಿಸಿ ಕೊಟ್ಟಿದ್ದಾರೆ. ಈ ಗೀತೆಯನ್ನ ವಿಶ್ವವಿದ್ಯಾಲಯದ ಗೀತೆಯನ್ನಾಗಿ ನಾಡಗೀತೆಯ ನಂತರ ಹಾಡಲಾಗುತ್ತದೆ. ' ಜ್ಯೋತಿ ಬೆಳಗುತಿದೆ ಜ್ಞಾನದ ಜ್ಯೋತಿ ಬೆಳಗುತಿದೆ' ಎಂದು ಆರಂಭಗೊಳ್ಳುವ ಗೀತೆಯಲ್ಲಿ ಸಮಗ್ರ ಹೈದ್ರಾಬಾದ್ ಕರ್ನಾಟಕ ಕಾಣ ಸಿಗುತ್ತದೆ. ಅದರಲ್ಲೊಂದು ಸಾಲು 'ಸೌಹಾರ್ದತೆಗೆ ಮುದಗಲಣ್ಣ' ಎಂದಿದೆ‌. ನಾನೀಗ ಹೇಳ ಹೊರಟಿರುವುದು ನನ್ನೂರ ಸೌಹಾರ್ದತೆಯ ಕುರಿತು. ನಮ್ಮೂರನ ಮೊಹರಂ ಆಚರಣೆ ಅದ್ಭುತ. ಇಲ್ಲಿ ಮುಸ್ಲಿಂ-ಹಿಂದು ಬಾಂಧವರು ಸರಿ ಸಮನಾಗಿ ಪೈಪೋಟಿಗೆ ಬಿದ್ದವರಂತೆ ಮೊಹರಂ ಆಚರಿಸುತ್ತಾರೆ. ನಮ್ಮನಿ ಮೌಲಾಲಿ ದರ್ಗಾದ ಬಳಿಯೆ ಇದ್ದ ಕಾರಣ, ಈ ದೇವರ ಭೇಟಿಗೆ ಇತರೆ ದೇವರುಗಳು ಬರ್ತಾ ಇದ್ದುದನ್ನ ಬೆರಗಗಣ್ಣಿನಿಂದ ನೋಡ್ತಾ ಇದ್ದೇವು. ಕಿಲ್ಲೆದೊಳಗಿನ ಹುಸೇನ್ ಪಾಷಾ ದೇವರು ಮಾತ್ರ ಭೇಟಿಗೆ ಬರಾಂಗಿಲ್ಲ.ಅದೇನೊ ಕಥೆ ಇದೆಯಂತೆ‌. ಈ ದೇವರಿಗೆ ದಿರಿಸು ದೂರದ ಕಲ್ಯಾಣ ದಿಂದ ಬರ್ತದ. ಹಲಗಿ ಬಡಿತದ ಲಯದೊಂದಿಗೆ ಹುಲಿ ವೇಷಧಾರಿಯ ನೃತ್ಯ, ಕೆಂಡ ಹಾಯುವುದು, ಛತ್ರಿ ಹಿಡಿದುಕೊಂಡು ಕೋಲಾಟದ ಗೆಜ್ಜೆ ಕುಣಿತ ನೋಡುವುದರ ಸೊಗಸೇ ಬೇರೆ. ಎಲ್ಲ ದೇವರುಗಳಿಗೆ ಕೆಂಪು ಸಕ್ರಿ ಅರ್ಪಿಸುವುದನ್ನ ಎಲ್ಲರೂ ಶ್ರದ್ಧೆಯಿಂದ ಮಾಡುತ್ತಾರೆ.  ಈ ದಿನಗಳಲ್ಲಿ ಮನೆಗಳಲ್ಲಿ ತಯಾರಿಸಲಾಗುವ ಮಾಲ್ದಿ(ಚಪಾತಿಯನ್ನು ಒಂದು ಹದಕ್ಕೆ ಕುಟ್ಟಿ ಪುಡಿ ಮಾಡಿ, ಸಕ್ಕರೆ, ಪುಟಾಣಿ ಸೋಪು ಸೇರಿಸಿ ಮಾಲಾಗುವ ಸಿಹಿ ತಿಂಡಿ)ಇಂಡಿಗೆ ನಾವೆಲ್ಲಾ ಫೀದಾ ಅಷ್ಟೇ. ಮೊಹರಂ ಕೊನೆಯ ದಿನದಂದು, ಕಿಕ್ಕಿರಿದ ಜನರ ಸಮ್ಮುಖದಲ್ಲಿ ದೇವರುಗಳ ಭೇಟಿ, ಆಗ ಹಾರಿಸಲಾಗುವ ತುಪಾಕಿಗಳ ಶಬ್ದಕ್ಕೆ ಕಿವಿ ತಮಟೆ ಹರಿದು ಹೋದಂತೆ ಭಾಸವಾಗುತ್ತದೆ. ಈ ಎಲ್ಲಾ ದೇವರುಗಳು ಅಪ್ಪಿಕೊಳ್ಳುವ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತದೆ. ಅಷ್ಟೇತ್ತರ ದೇವರುಗಳನ್ನು ಟೊಂಕಕ್ಕೆ ಸಿಕ್ಕಿಸಿಕೊಂಡು  ಸಮತೋಲನ ಕಾಪಾಡುವುದು ನಿಜಕ್ಕೂ  ಶ್ರದ್ಧೆಯ ಫಲಶೃತಿ. ಮೇಲಿನ ಪೇಟೆಯ ಹಸನ್ ಪಾಷಾ ದೇವರು ಕಿಲೆದೊಳಗೆ ಹೋಗಲು ಪ್ರಯತ್ನಿಸುತ್ತಾರೆ.ಅವರು ಪ್ರವೇಶಿಸಿದರೆ ಪ್ರಳಯ ಎಂದು ಪ್ರತೀತಿ ಇದೆ. ಅವರನ್ನು ತಡೆಯುವುದರೊಂದಿಗೆ ಎಲ್ಲ ದೇವರರುಗಳು ಹಳೆ ಪೇಟೆಯೆಡೆ ಮೆರವಣಿಗೆಯಲ್ಲಿ ಲಯಬದ್ಧ ನಗಾರಿಯ ವಾದನ ದೊಂದಿಗೆ ತೆರಳುವ ದೃಶ್ಯ ನಯನ ಮನೋಹರ. ಮೊಹರಮ್ ಸಮಯದ ಜಾತ್ರೆಯ ವಾತಾವರಣ, ಬೆಂಡು, ಬತ್ತಾಸು, ಹತ್ತಿಕಾಯಿ,  ಡಾಣಿ, ಲಡ್ಡು, ಜಿಲೇಬಿ ತಿಂದದ್ದೆ ತಿಂದದ್ದು. ಅಪ್ಪಾ, ಅಮ್ಮಾ ತಾತಾ ಅವರುಗಳ  ಜೇಬಿಗೆ ಕತ್ತರಿ. ಹೆಂಗಳೆಯರಿಗೆ  ಬಗೆ ಬಗೆಯ ಬಳೆ ಅಂಗಡಿಗಳು ಕೈ ಬೀಸಿ ಕರೆಯುತ್ತಿರುತ್ತವೆ. ಮುದಗಲ್ ಮೊಹರಮ್ ಕುರಿತು ಬೆಂಗಳೂರು  ದೂರದರ್ಶನ ಶೂಟ ಮಾಡಿ ಪ್ರಸಾರ ಮಾಡಿದರೆ ರಾಜ್ಯದ ಎಲ್ಲರು ನೋಡಿದಂತಾಗುತ್ತದೆ‌  ಒಟ್ಟಿನಲ್ಲಿ, ಒಮ್ಮೆ ನೋಡಲೇ ಬೇಕು ನಮ್ಮೂರ ಮೊಹರಮ್.

ಅಪ್ಪ -ಆಪ್ತ ಸಖ

ನಿಮ್ಮನ್ನು ಸ್ವಲ್ಪ ಫ್ಲಾಷ ಬ್ಯಾಕ್‌ಗೆ ಕರೆದೊಯ್ಯತ್ತೇನೆ ವಾಚಕ ಮಹಾಶಯ. ಅದು ೧೯೮೫ರ ನವೆ೦ಬರ ತಿ೦ಗಳು, ರಾಯಚೂರಿನ ರೇಲ್ವೆ ನಿಲ್ದಾಣದಲ್ಲಿ ಅ೦ದು ಅಪ್ಪನ ಕಣ್ಣ೦ಚಿನಲ್ಲಿ   ಅಶ್ರುಧಾರೆ  ತೊಟ್ಟ್ಟಿಕ್ಕುತ್ತಿತ್ತು, ಅಮ್ಮನ ಎರಡು ನಯನಗಳಿ೦ದ ಗಗನಚುಕ್ಕಿ ಭರಚುಕ್ಕಿ ಭೋಗ೯ರೆವುತ್ತ್ತಿದ್ದವು. ಇದ್ದ ನೌಕರಿಗೆ ತಿಲಾ೦ಜಲಿ ಇತ್ತು ದುಬೈಗೆ ಹೋಗಿ ಸಿರಿವ೦ತನಾಗಿ ಅಥಿ೯ಕವಾಗಿ ದುಬ೯ಲವಾಗಿದ್ದ ಏಳು ಸದಸ್ಯರ ನಮ್ಮ ಕುಟು೦ಬಕ್ಕೆ ಕಿ೦ಚಿತ್ ಸಹಾಯ ಮಾಡುವ  ನನ್ನ ಆಶಯಕ್ಕೆ ಅಪ್ಪ ಅಮ್ಮನ ಬೆ೦ಬಲ ಸಿಕ್ಕಿರಲಿಲ್ಲ. ಹಣ ಗಳಿಸಲು ವಿದೇಶಕ್ಕೆ ಹೋಗುವುದು ಅಪ್ಪನ ಆತ್ಮ ಸಾಕ್ಷಿಗೆ ವಿರುದ್ಧವಾಗಿತ್ತು. ನನ್ನ ಅದೃಷ್ಟಕ್ಕೆ,  ಯಾವ ಏಜೆ೦ಟನ ಸಹಾಯವಿಲ್ಲದೆ ದುಬೈನ ಪ್ರತ್ಠಿತ ಸ೦ಸ್ಥೆಯಿಂದ  ಕೈತು೦ಬಾ ವೇತನದ  ಸಿವಿಲ್ ಇ೦ಜಿನಿಯರ್ ಹುದ್ದೆಗೆ  ನೇಮಕಾತಿ ಆದೇಶ ಬ೦ದಿತ್ತು.   ನಾನು ತಮ್ಮನೊಡನೆ ಮು೦ಬೈಗೆ ಹೊರಟು ನಿ೦ತೆ. ಕಳಿಸಲು ಬ೦ದ ತಮ್ಮ ಮುಂಬೈನಲ್ಲಿ  ಹೋಗ ಬೇಡ ಎ೦ದೆ ಹೇಳುತ್ತಲೆ ಇದ್ದ. ಗಟ್ಟಿ ನಿರ್ಧಾರ ಮಾಡಿದ್ದ ನಾನು  ಮು೦ಬೈನಲ್ಲಿ ವಿದೇಶಕ್ಕೆ ಹೋಗುವ ವಿಧಿ ವಿಧಾನಗಳನ್ನೆಲ್ಲಾ ಒಂದೇ  ದಿನದಲ್ಲಿ ಮುಗಿಸಿ, Protector of Emigrants ಕಛೇರಿಯಲ್ಲಿ ಪಾಸಪೋಟ೯ನಲ್ಲಿ Emigration clearance granted for UAE  ಸ್ಟಾ೦ಪನ್ನು ಪಡೆದುಕೊಂಡು  ಬೆಳಗಿನ ಆಕಾಶಯಾನಕ್ಕೆ ಸಿದ್ಧನಾಗಿದ್ದೆ. ನ೦ತರದ ೮ ಗ೦ಟೆಗಳಲ್ಲಿ ನಡೆದ ವಿದೇಶಕ್ಕೆ ಹೋಗಲೋ ಬೇಡವೋ ಎಂಬ  ಮಾನಸಿಕ ವಿಪ್ಲವದಲ್ಲಿ ಜಯ ಸಿಕ್ಕಿದ್ದು ಅಪ್ಪನ ನಿಲುವಿಗೆ. ವಿಮಾನ ನಿಲ್ದಾಣಕ್ಕೆ ಹೋಗ ಬೇಕಾದ ನಾನು, ವಿದೇಶದ ನೌಕರಿ ಧಿಕ್ಕರಿಸಿ ಮರಳಿ ಬ೦ದಿದ್ದೆ. ಆಣ್ಣನನ್ನು ವಾಪಾಸ ಕರೆ ತ೦ದ ಗೆಲುವಿನ ಕಳೆ ತಮ್ಮನಲ್ಲಿದ್ದರೆ, ತಮ್ಮ ಉಪದೇಶವನ್ನು ಮಾನ್ಯ ಮಾಡಿದ ಮಗನ ಬಗ್ಗೆ ಅಭಿಮಾನ ಅಪ್ಪನ ಕ೦ಗಳಲ್ಲಿತ್ತು  


    ಮೂಲತ: ಸ೦ಪ್ರದಾಯಸ್ಥ  ಬಡ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಅಪ್ಪ ಬಾಲ್ಯದಲ್ಲಿ  ತ೦ದೆಯನ್ನು ಕಳೆದುಕೊ೦ಡು ಅಮ್ಮನ ಆರೈಕೆಯಲ್ಲಿ ಬೆಳೆದ. ಜನಿಸಿದ ಎ೦ಟು ಮಕ್ಕಳಲ್ಲಿ, ದಕ್ಕಿದ ಎರಡು ಮಕ್ಕಳ ಜೀವನ ಉಜ್ವಲವಾಗಲು ನಮ್ಮ ಅವ್ವ(ಅಜ್ಜಿ)ಪಟ್ಟ ಕಷ್ಟ ಅ್ಟಷ್ಟಲ್ಲ. ಆಟವಾಡುವ ಸ೦ಧಭ೯ದಲ್ಲಿ ಹುಡುಗನೊಬ್ಬನ ಕಲ್ಲೆÃಟಿಗೆ ಅಪ್ಪನ ಒ೦ದು ಕಣ್ಣು ಶಾಶ್ವತವಾಗಿ ಕುರುಡಾಗಿತ್ತು. ಕಿತ್ತು ತಿನ್ನುವ ಬಡತನವಿದ್ದರೂ, ಇದ್ದ ಒಬ್ಬ ಮಗ ಹಾಗೂ ಮಗಳ ಬಾಳಿಗಾಗಿ ಅಜ್ಜಿ ಅವಲಕ್ಕಿ ಕುಟ್ಟುವುದು ಸೇರಿದ೦ತೆ ಸಣ್ಣ ಪುಟ್ಟ ಕೆಲಸಗಳನ್ನು ನಿವ೯ಹಿಸಿ ಮಕ್ಕಳನ್ನು ಬೆಳೆಸಿದಳು. ಆದಾಯವಿರದ ದಿನ ಮದಕರಿ(ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು ಎ೦ಬ ಪುರ೦ದರ ದಾಸರ ಹಾಡನ್ನು ನೆನಪಿಸಿಕೊಳ್ಳಿ)ಮೂಲಕ, ವಾರಾನ್ನದ ಮನೆಗಳ ಮೂಲಕ  ತುತ್ತಿನ ಚೀಲ ತು೦ಬಿಸಿದ ಅಪರೂಪದ  ಜೀವ ನಮ್ಮ ಅವ್ವ. ಓದಿನಲ್ಲಿ ಅತ್ಯ೦ತ ಪ್ರತಿಭಾನ್ವಿತನಾಗಿದ್ದ  ಅಪ್ಪ ಜೀವನ ನಿವ೯ಹಣೆಗೆ ಹಿಡಿದಿದ್ದು  ಶಿಕ್ಷಕ ವೃತ್ತಿ, ವರಿಸಿದ್ದು ಮುದಗಲ್ಲಿನ ಆಚಾಯ೯ರ ಮಗಳನ್ನು.  ಚೊಚ್ಚಲ ಮಗನಾದ ನನ್ನ ಮೇಲೆ ಇಬ್ಬರಿಗೂ ಅಪಾರ ಪ್ರಿÃತಿ. ನನಗೆ ಅರಿವು ಮೂಡಿದಾಗಿನಿಂದ ಅಪ್ಪನಿ೦ದ ಅಥವಾ ಅಮ್ಮನಿ೦ದ ಬೈಸಿಕೊ೦ಡ ನೆನಪು ನನಗೆ  ಇಲ್ಲ. ವಗ೯ವಾದೊಡೆಯೆಲ್ಲ ಯಾವದೇ ತಕರಾರಿಲ್ಲದೆ ಹೋಗುತ್ತಿದ್ದ ಅವರ ನಿಲುವಿನಿ೦ದ ನಮಗೆಲ್ಲ ಕನಾ೯ಟಕ ದಶ೯ನ. ನಾನು ತಪ್ಪು ಮಾಡಿದಾಗಲೆಲ್ಲ ಎಲ್ಲರ ಮು೦ದೆಯೇ ತರಗತಿಯಲ್ಲಿ ನಿದಾ೯ಕ್ಷಿಣ್ಯವಾಗಿ ದ೦ಡಿಸುತ್ತಿದ್ದುದು ಇನ್ನು ಮಾಸಿಲ್ಲ. ಲೇಖನಿಯೆ ಹರಿತವಾದ ಆಯುಧ, ಬರವಣಿಗೆಯೆ ಬಲವಾದ ಶಕ್ತಿ ಎ೦ದು ಪ್ರತಿಪಾದಿಸುತ್ತದ್ದ ಅಪ್ಪನ ಬರವಣಿಗೆಯ ಹರಿತಕ್ಕೆ ಅವರ ಸಕಾ೯ರಿ ಕೆಲಸಗಳು ತಾವಾಗಿಯೆ ವಿಲೆವಾರಿಯಾಗುತ್ತಿದ್ದವು. ಅವರ ವೇತನ,  ೫ ಮಕ್ಕಳ ತು೦ಬು ಸ೦ಸಾರಕ್ಕೆ ಸಾಲುತ್ತಿರಲಿಲ್ಲ. ಆದರೂ ಸಾಲ ಸೋಲ ಮಾಡದೆ ಸ೦ಸಾರವನ್ನು ನಿಭಾಯಿಸುತ್ತಿದ್ದ ಅಮ್ಮನ ಚಾಕಚಕ್ಯತೆಯ ಗುಟ್ಟು ಇ೦ದಿಗೂ ತಿಳಿದಿಲ್ಲ. ಕ್ಷಮಯಾ ಧರಿತ್ರಿ, ಕರಣೇಷು ಮ೦ತ್ರಿ, ಕಾಯೇ೯ಷು ದಾಸಿ, ಭೋಜೆಷು ಮಾತಾ ಎ೦ಬ ನುಡಿಗಳಿಗೆ ಅನುರೂಪವಾಗಿದ್ದ ಅಮ್ಮ, ಅಪ್ಪನ ಮಾಗ೯ದಶಿ೯ ಸಹ ಆಗಿದ್ದಳು.  ಹಣೆಗೆ ಢಾಳಾದ ಕು೦ಕುಮದಿ೦ದ ಅಮ್ಮನನಿಗೆ ಒ೦ದು ವಿಶೇಷ ವಚ೯ಸ್ಸೆ ಇತ್ತು. ಮದುವೆ ಮು೦ಜಿಗಳಲ್ಲಿ ಮು೦ಚೂಣಿಯಲ್ಲಿರುತ್ತಿದ್ದ ಅಮ್ಮನ ಹಾಡುಗಳಿಗೆ ಹಾಗೂ ವಿಷ್ಣುವಿನ ದಶಾವತಾರದ ಒಗಟು ಹಾಕಿ ಗ೦ಡನ ಹೆಸರು ಹೇಳುವ ಮೋಡಿಗೆ ಸಖತ್ ಬೇಡಿಕೆ ಇತ್ತು.  ಮಕ್ಕಳ ಭವಿಷ್ಯದ ಬಗ್ಗೆ ದೂರದ್ಠೃಷ್ಠಿ ಇದ್ದ ಅಪ್ಪ ನನ್ನ ಮನವೊಲಿಸಿ ಸೇರಿಸಿದ್ದು (ನನ್ನ ಆಯ್ಕೆ ಬ್ಯಾ೦ಕ್ ನೌಕರಿಯಾಗಿತ್ತು)ಸಿವಿಲ್ ಇ೦ಜಿನಿಯರಿ೦ಗ ಡಿಪ್ಲಮೊ ಕೋಸ೯ಗೆ. ನನಗೆ ಶಹಾಬಾದ್‌ನ ಎಬಿಎಲ್ ಕಾಖಾ೯ನೆಯಲ್ಲಿ ಉದ್ಯೊÃಗ ಲಭಿಸಿ ತಿ೦ಗಳಿಗೆ ಇ೦ತಿಷ್ಟು ಅ೦ತ ಹಣವನ್ನು ಕಳಿಸಲು ಆರ೦ಭಿಸಿದ ಮೇಲೆಯೆ ಅಪ್ಪ ಆಥಿ೯ಕವಾಗಿ ಸ್ವಲ್ಪ ಚೇತರಿಸಿಕೊ೦ಡು ಉಳಿದ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನಿರತನಾದ.


    ವಗ೯ವಾದೆಡೆ ಹೋಗುವ ಅಪ್ಪನ ನಿಲುವೆ ಅವರಿಗೆ ಮುಳುವಾÄತು. ತನ್ನ ಕಾಯ೯ಕ್ಷಮತೆಯಿ೦ದ ಹ೦ತ ಹ೦ತವಾಗಿ ಪದೋನ್ನತಿ ಹೊ೦ದುತ್ತ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಉದಯಪುರಕ್ಕೆ ಸಕಾ೯ರಿ ಕಿರಿಯ ಕಾಲೇಜಿನ ಪ್ರಾಚಾಯ೯ರಾಗಿ ನೇಮಕಗೊ೦ಡ. ಮೊದಲಿನಿ೦ದಲೂ ಕಾಡಿಸುತ್ತಿದ್ದ ಮಧುಮೇಹ ತನ್ನ ಪ್ರತಾಪವನ್ನು ತೋರಿಸಲು ಆರ೦ಭಿಸಿಯೆಬಿಟ್ಟಿತು. ಒಬ್ಬ೦ಟಿಗನಾಗಿ ಇದ್ದ ಅಪ್ಪನಿಗೆ ಅಲ್ಲಿ ರೊಟ್ಟಿ ಊಟ ಸಿಗಲಿಲ್ಲ. ಪಥ್ಯದ ಊಟವಿಲ್ಲದೆ ಇದ್ದ ಒ೦ದು ಕಣ್ಣು ಮ೦ಜಾಗಿತ್ತು. ಧೃತಿಗೆಡದೆ ಲೇಸರ ಚಿಕಿತ್ಸೆ ಪಡೆದು ಪುನ: ಕಾಯಕ ಮು೦ದುವರೆಸಿದ ಅಪ್ಪನನ್ನು ರಾಯಚೂರು ಜಿಲ್ಲೆಯ ಕವಿತಾಳಗೆ ಬೀಗರ ಸಹಾಯದಿ೦ದ ವಗ೯ ಮಾಡಿಸಲೇಬೇಕಾಯಿತು.  ಆದರೂ ಕೊನೆಗೆ ಮದುಮೇಹದ ಪರಾಕ್ರಮಕ್ಕೆ ಬಲಿಯಾಗಿ ನಮ್ಮನ್ನೆಲ್ಲ ಅಗಲಿ ಹೋಗಿಯೇ ಬಿಟ್ಟ. ಇದ್ದಾಗ, ಸದಾ ಸ೦ಸಾರಕ್ಕಾಗಿ ಮಕ್ಕಳ ಕುರಿತು ಯೋಚಿಸುತಿದ್ದ ೫ ಮಕ್ಕಳಲ್ಲಿ ಏಕೈಕ ಪುತ್ರಿಯಾದ ನಮ್ಮ ತ೦ಗಿಯನ್ನು(ಅವಳೀಗ ಅಪ್ಪನ ಕಾಯಕ ಮು೦ದುವರೆಸುವ ಶಿಕ್ಷಕಿಯಾಗಿದ್ದಾಳೆ) ಬಹಳ ಹಚ್ಚಿಕೊ೦ಡಿದ್ದ. ತಾನಿರುವಾಗಲೆ, ತನ್ನಿಚ್ಛೆಯ೦ತೆ ಬ್ಯಾ೦ಕ ಉದ್ಯೊÃಗಿಗೆ ಕೊಟ್ಟು ಮದುವೆ ಮಾಡಿದ್ದ. ನನಗೂ,  ತಾನು ಬಾಲ್ಯದಲ್ಲಿದ್ದಾಗ ಕೆಲಸ ಮಾಡಿದ  ಸಿರಿವ೦ತ ಮನೆತನದ ಚೆಂದುಳ್ಳಿ ಚೆಲುವೆ  ಹುಡುಗಿಯನ್ನೆ ಆರಿಸಿದ್ದ. ಬ್ಯಾ೦ಕ ನೌಕರಿಯಲ್ಲಿದ್ದ ನನ್ನ ತಮ್ಮನಿಗೆ ಅವನಿಚ್ಛೆಯ೦ತೆ  ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿ ನೋ೦ದಣಿ ಅಧಿಕಾರಿಗಳ ಕಛೇರಿಯಲ್ಲಿ ಸಾಕ್ಷಿಯಾಗಿ ಸಹಿ ಮಾಡಿ ತನ್ನ ಹೃದಯ ವೈಶಾಲ್ಯವನ್ನು ಮೆರೆದಿದ್ದ.  ಇಂಥಾ ಜೀವನ ಸಂಗಾತಿಯನ್ನು ಕಳೆದುಕೊ೦ಡ ಅಮ್ಮನ್ನು ಸ೦ತೈಸಲು ನಮ್ಮಿ೦ದಾಗಿರಲಿಲ್ಲ. ದು:ಖ ತಗ್ಗಿದ ನ೦ತರ ನಿಧಾನವಾಗಿ ಸ೦ಸಾರದ ನೊಗವನ್ನು ಹೆಗಲಿಗೇರಿಸಿಕೊ೦ಡ ಅಮ್ಮನ ಮು೦ದೆ  ನನ್ನ ಇಬ್ಬರು ತಮ್ಮ೦ದಿರ ಬಾಳು ರೂಪಿಸುವ ಜವಾಬ್ದಾರಿ ಇತ್ತು. ಆದರೂ, ವಿಧಿಯಾಟ ಬೇರೆಯೇ ಇತ್ತು.  ನಿದ೯ಯಿ ಕ್ಯಾನ್ಸರ್ ರೋಗಕ್ಕೆ ಬಲಿಯಾದ ಅಮ್ಮ ಕೊನೆ ಮಗನ ಬಾಳು ರೂಪಿಸುವಲ್ಲಿ ಸೋತು ಯಮ ಧಮ೯ರಾಯ ಬೀಸಿದ ಕುಣಿಕೆಗೆ ಶರಣಾಗಿದ್ದಳು. ಅವಳನ್ನು ಬದುಕಿಸುವ ನಮ್ಮ ಪ್ರಯತ್ನ ಕೊನೆಗೂ ಫಲ ಕೊಡಲೇ ಇಲ್ಲ. ಶಸ್ತ್ರಚಿಕಿತ್ಸೆ, ರೇಡಿಯೋ ಥೆರಪಿ, ಹಿ೦ಸಾತ್ಮಕ ಕೀಮೋ ಥೆರಪಿಗೂ ಬಗ್ಗದ ಕ್ಯಾನ್ಸರ್ ಅಮ್ಮನ ಜೀವ ಪಡೆದ ವಿಜಯದಲ್ಲಿ ಅಟ್ಟಹಾಸದ ಮೆರೆದಿತ್ತು. ನನ್ನ ೨ನೇ ತಮ್ಮನ ಮದುವೆಯವರೆಗಾದರೂ ಈಕೆಗೆ ಆಯುಷ್ಯನ್ನು ದಯಪಾಲಿಸು ಎ೦ದು ಬೇಡಿದ್ದೆವು. ತರಾತುರಿಯಲ್ಲಿ ಒಂದೇ ವಾರದಲ್ಲಿ ಅವನ ಮದುವೆಯನ್ನು ಸಹ ಮಾಡಿದ್ದೆವು. ಅಮ್ಮನಿಗೆ ಶಾ೦ತಿಯುತವಾದ ಮರಣ ಕರುಣಿಸು ಎ೦ದು ದೇವರಲ್ಲಿ ಪ್ರಾಥಿ೯ಸುವುದೊ೦ದೆ ನಿಮಗಿರುವ ದಾರಿ ಎ೦ದ ವೈದ್ಯರ ಸಲಹೆಯನ್ನಾದರೂ ಕರುಣಿಸು ದೇವಾ ಎ೦ಬ ನಮ್ಮ ಪ್ರಾಥ೯ನೆಗೆ, ಪ್ರಾಣಾ೦ತಕ  ನೋವನ್ನು ಮರೆಸಲು ಕೊಡುವ ಮಾಫಿ೯ನ ಎ೦ಬ ಔಷಧಿಯ ಸೊ೦ಪಾದ ನಿದ್ರೆಯಲ್ಲಿದ್ದಾಗಲೆ ಪ್ರಾಣಪಕ್ಷಿ ಹಾರುವ೦ತೆ ಮಾಡಿದ ಆ ಭಗವ೦ತನಿಗೆ ಸಾವಿರ  ನಮನಗಳು. ಕೊನೆ ತಮ್ಮನ ಬಾಳನ್ನು ರೂಪಿಸುವಲ್ಲಿ ನನ್ನಾಕೆಯದು ಸಿ೦ಹ ಪಾಲು. ಈಕೆ ಅಮ್ಮನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಕಾರಣ,  ನನ್ನ ಕೊನೆಯ ತಮ್ಮ ಈಗ ವಿದೇಶದಲ್ಲಿ ಪ್ರಾಚಾಯ೯ನಾಗಿ ತಿ೦ಗಳಿಗೆ ಲಕ್ಷ್ಯಗಳಲ್ಲಿ ಸ೦ಪಾದಿಸುತ್ತಿದ್ದಾನೆ. ಬೆ೦ಗಳೂರಿನ ಚೆ೦ದದ ಹುಡುಗಿಯನ್ನು ವರಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾನೆ.  ಮಕ್ಕಳ ಏಳ್ಗೆಯನ್ನು ನೋಡಿ ಹಿರಿ ಹಿರಿ ಹಿಗ್ಗುವ ಜೀವಗಳನ್ನು ಕಳೆದುಕೊ೦ಡ ಹಲವಾರು ನತದೃಷ್ಟರಲ್ಲಿ ನಾವು ಕೂಡಾ  ಸೇರಿದ್ದೇವೆ.

ಮುದ್ದಿ-ಪಲ್ಯ

ಮುದ್ದಿ ಪಲ್ಯ


ಮುದ್ದಿಪಲ್ಯ ಹೆಸರು ಕೇಳಿದರ ನನ ಬಾಯಾಗ ನೀರ ಒಸರತಾವ. ನನ್ನ ಹಾಂಗ ಮುದ್ದಿಪಲ್ಯ ಅಭಿಮಾನಿಗಳು ಭಾಳ ಮಂದಿ ಅದರಾ ಅಂತ ನನಗನ್ಸ್ಯಾದ. ಏನಿದು  ಅಂತಾ ನಿಮ್ ತಲ್ಯಾಗ ಹುಳಾ ಕೊರಿಲಕ್ಹತ್ತಿರ್ಬಹ್ದು. ಮುದ್ದಿಪಲ್ಯ ಅಂದರ,,,,,ಈ ಭಾಗದ ಅತ್ಯಂತ ಜನಪ್ರಿಯ ವ್ಯಂಜನ ಅದು. ಅದರಲ್ಲೂ ಬ್ರಾಹ್ಮಣರಲ್ಲಿ ಸ್ವಲ್ಪ ಜಾಸ್ತಿ. ತೊಗರಿ ಬ್ಯಾಳಿನ ಘಟ್ಟಿ ಹದಕ್ಕ ಬೇಯ್ಸಿ, ಅದರಾಗ ಮೆಂತಿ, ಹುಣಸಿಕ್, ಪಾಲಕ, ಗೋಳಿ ಹಿಂಗ ಯಾವ್ದರ ಒಂದ ತಪ್ಪಲ ಪಲ್ಯನಾ ತಾಳ್ಸಿ,,,,ಬ್ಯಾಳಾಗ ಕಲೆಸಿ,ಒಂದ್ಕಾಲ್ಕ್ ಬ್ಯಾಡ್ಗಿ ಮೆಣ್ಸಿನ್ಕಾಯಿ ಹಾಕಿ ಒಗ್ಗರಣಿ ಕೊಟ್ರ ಏನ ಹೆಳ್ಳರ್ರಿ ಅದರ ಕಥಿ. ನಮ್ಕಡಿ,,ವಿಶೇಷ ಅಂದರ,,,ಪುಂಡಿ ಪಲ್ಯ ಸೇರ್ಸಿ ಮಾಡೋ ಮುದ್ದಿಪಲ್ಲ ಅಂದ್ರ ಅದಕ್ಕ ಸೆಲೆಬ್ರಿಟಿ ಸ್ಥಾನ ಬಂದ್ಹಾಂಗ ತಿಳ್ಕೋರಿ. ಈ ಮುದ್ದಿಪಲ್ಯ ಸಲುವಾಗಿನ ಕೆಲ ಸಲ ಮದುವಿ ಮನ್ಯಾಗ ಜಗಳ ಆಗ್ತಾವ. 'ಹಣಿಬಾರ್ದಾಗ ಮುದ್ದಿಪಲ್ಯ ಮಾಡ್ಸೂದು ಆಗಿಲ್ಲ' ಎಂಬ ಮೂದಲಿಕೆಯ ವಾಗ್ಬಾಣ ಸಹಜ. ನನ್ಗಂತೂ, ಹುಳಿ ಮಾಡಿದ ದಿನ, ನಮ್ಮಮ್ಮ ನನ್ಸಲುವಾಗಿಯೇ ಬ್ಯಾಳಿ ಬ್ಯಾರೆನ ತಗ್ದಿಟ್ಟು  ಮುದ್ದಿಪಲ್ಯ ಮಾಡಿ ಬಡಸ್ತಿದ್ಳು, ಅಷ್ಟು ಕಕ್ಕುಲಾತಿ ನನ ಮ್ಯಾಲೆ. ನನ್ಕಹಿಡಿದಾಕೆಯೂ ಮುದ್ದಿಪಲ್ಯದ Authority  ಆಗ್ಯಾಳ. ಈಗಿನ ಕಾಲ್ದಾಗ ಏನೆಲ್ಲಾ ನವ ನವೀನ ಖಾದ್ಯಗಳು ಬಂದ್ರೂ,,,ಅವ್ಯಾವು ಮುದ್ದಿಪಲ್ಯದ ಅಗ್ರಸ್ಥಾನ ಪಲ್ಲಟ ಮಾಡ್ಲಿಕ್ಕೆ ಆಗಿಲ್ಲ. ಅಂಥಾ, ಖದರ್ರು ಈ ಮುದ್ದಿಪಲ್ಯದ್ದು,,,,,ನಿವೇನಂತಿರಿ,,,,

ವೈನಿ

ವೈನಿ:


ಈ ವೈನಿ ಬಗ್ಗೆ ಬರೆಯೋದು ಸುಲಭದ ತುತ್ತಲ್ಲ. ನಿವಂದ್ಕೊಂಡ ಹಾಗೆ ಈ ವೈನಿ ನನ್ನಣ್ಣನ ಪತ್ನಿಯೂ ಅಲ್ಲ. ಇವರು ಇಡೀ ಮುದಗಲ್ ಪಟ್ಟಣಕ್ಕೇನೆ ವೈನಿ.ಹೌದು ಅಂತಹ ವ್ಯಕ್ತಿತ್ವ ಅವರದ್ದು. ಅದು ಪ್ರಾಯಹಃ, ೭೦ರ ದಶಕದ ನನ್ನ ಪ್ರಾಥಮಿಕ ಶಾಲೆಯ ದಿನಗಳವು. ನಾನು ಹೇಳ ಹೊರಟಿರುವ ವೈನಿ(ಇಂದಿಗೂ ಅವರ ಹೆಸರು ಗೊತ್ತಿಲ್ಲ)ನನ್ನ ಬಾಲ್ಯದ ದಿನಗಳಲ್ಲಿ,  ಅಮ್ಮನನ್ನು ಹೊರತು ಪಡಿಸಿ ಅತ್ಯಂತ ಪ್ರಭಾವ ಬೀರಿದವರು. ಹಣೆಗೆ ಢಾಳಾದ ಕುಂಕುಮ, ಒಂಭತ್ತು ಗಜದ ಸೀರಿ ಕಚ್ಚಿ ಹಾಕಿ ಉಟ್ಟು ಪಾದರಸದಂತೆ ಓಡಾಟದ ನಮ್ಮ ವೈನಿ ಇರದ ಕಾರ್ಯಕ್ರಮಳೆ ವಿರಳ ಮುದಗಲ್ ನಲ್ಲಿ. ವಿಶೇಷವಾಗಿ ದೀಪಾವಳಿಯ ನಸುಕಿನ ಆರತಿಯ ಕ್ಷಣಗಳನ್ನು ಮರೆಯಲಾರೆ. ನಮ್ಮೂರಲ್ಲಿ ಈ ಆರತಿ ಎಲ್ಲರ ಮನೆಯಲ್ಲಿ ನಡೆಯುತ್ತದೆ. ಆ ಸಂಭ್ರಮ. ಸೊಗಸೇ ಬೇರೆ. ಆರತಿ ತಟ್ಯಾಗ ಯಾರ್ಯಾರ ರೊಕ್ಕ ಹಾಕಿರ್ತಾರ, ಅವರ ಮನಿಯೊಳಗಿನ ಆರತಿ ಸಂಧರ್ಭದಲ್ಲಿ ನಾವು ಮರಳಿ ರೊಕ್ಕ ಹಾಕುವುದು ಒಂದು ಪದ್ಧತಿ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ, ಅಯಾ ಮನೆಗಳ ಆರತಿಯ ಸಂಧರ್ಭದಲ್ಲಿ ಎಚ್ಚರಿಸುವುದು ನಮ್ಮ ಈ ವೈನಿಯ ವಿಶೇಷ ಗುಣ. ಮದುವೆಯ ಸಡಗರದಲ್ಲಿ ವೈನಿ ಬರುವುದು ತಡವಾದರೆ ಏನೋ ಕಳಕೊಂಡವರಂತೆ ಚಡಪಡಿಕೆ. ಎಲ್ಲರನ್ನು ಹುರಿದುಂಬಿಸಿ ಬೀಗರನ್ನು ಎದಿರುಗೊಂಡು, ವಾಗ್ನಿಶ್ಚಯ, ಭೂಮದೂಟ, ವ್ಯಂಗಭರಿತ ಹಾಡುಗಳು ಎಲ್ಲದರಲ್ಲೂ ವೈನಿ ಮುಂದೆ. ಮರು ದಿವ್ಸ, ಸುರಗಿ, ಪುಣೋಚನ, ಅಕ್ಷತೆ, ಲಡ್ಡಿಗಿ ಭೂಮ, ಲಾಜಾ ಹೋಮ, ಸಿಂಧೂಪ, ಹೆಣ್ಣು ಒಪ್ಸ್ಕೊಳ್ಳೊದು ಎಲ್ಲದರಲ್ಲಿ ವೈನಿಯ ಪರಿಣತಿ ಎದ್ದು ಕಾಣುತಿತ್ತು. ಹೆಣ್ಣು ಒಪ್ಪಿಸುವ ಘಳಿಗೆಯಲ್ಲಿನ ವೈನಿಯವರ ಹಾಡು ನೇರ ನಮ್ಮ ಭಾವತಂತಿ ಮೀಟಿ ಕಂಗಳಿಂದ ಅಶ್ರುಧಾರೆ ಶತಸಿದ್ಧ. ಅವರೇ ಸಾವರ್ಸ್ಗೊಂಡು ' ಅತ್ತದ್ದು ಸಾಕು ಮುಂದಿನ ಕೆಲ್ಸ ಸಾಗಸ್ಸಣ ನಡಿರಿ'ಎನ್ನುತ್ತಾ ಎಲ್ಲವನ್ನು ಸಾಂಗೊಪಾಂಗವಾಗಿ ನೆರವೇರುವಂತೆ ಮಾಡುವ ಕುಶಾಗ್ರಮತಿ ವೈನಿ. ನಮ್ ಮುತ್ಯಾ(ಅಮ್ಮನ ತಂದೆ) ಸಂಜಿ ಮುಂದ ವೈನಿ ಮನಿ ಕಟ್ಯಾಗ ಕೂತ್ಗೊಂಡು ಜೋತಿಷ್ಯ ಹೇಳುತ್ತಿದ್ದ ದೃಶ್ಯ ಇನ್ನು ನನ್ನ ಸ್ಮೃತಿಪಟಲ ದಿಂದ ಮಾಸಿಲ್ಲ. ಇನ್ನೂ ಬೇರೆ ಊರಿಂದ ಬಂದವರಿಗೆ ವೈನಿ ಮನಿ ಒಂದು land mark.ವಿಳಾಸ ಹುಡುಕವ್ರಿಗೆ,,,,,'ವೈನಿ ಮನಿಗೆ ಹೋಗಿ ಮುಂದ ಬಲಕ ಹೊಳ್ರಿ' ಎಂಬಂತಹ ಉಲ್ಲೇಖಗಳು ಸಾಮಾನ್ಯ. ನಾಗರ ಪಂಚಮಿ ಸಮಯದ  ಅವರ ಮನೆಯ ಚಿಗಳಿ,ತಂಬಿಟ್ಟು, ಅಳ್ಳಿನ ರುಚಿ ಸವಿದವನೆ ಬಲ್ಲ. ಏನೇ ಕೌಟುಂಬಿಕ  ಕಾರ್ಯವಿರಲಿ ಮೊದಲ ಹಾಜರಾತಿ ವೈನಿಯದು. ಸಾವಿನ ಮನೆಯಲ್ಲಿ ಸಾಂತ್ವನ ಹೇಳುವ ಇವರ ಕಳಕಳಿ ಮರೆಯಲಾಗದ್ದು. ತನ್ನ ನಾಲ್ಕು ಮಕ್ಕಳನ್ನು ಬುದುಕಿನ  ದಡಕ್ಕೆ ಸೇರಿಸಿದ ಇಂತಹ ಅಃತಕರಣದ ಜೀವ ಶ್ರೀ ಹರಿಯ ಪಾದ ಸೇರಿಕೊಂಡು ಬಹಳ ದಿನಗಳಾಗಿವೆ. ಈಗಿನ ಪಿಳಿಗೆ ನಂಬಲು ಅನುಮಾನಿಸುವ ವ್ಯಕ್ತಿತ್ವ ನಮ್ಮ ವೈನಿಯದ್ದು.

ಒಂದೆ ಬಳ್ಳಿಯ ಹೂಗಳು

ಒಂದೆ ಬಳ್ಳಿಯ ಹೂಗಳು:-ಹೌದು, ನಾನೀಗ ಹೇಳ ಹೊರಟಿರುವುದು ಒಂದೆ ಬಳ್ಳಿಯ ಹೂಗಳು ಎಂಬ ಹಳೆಯ ಕನ್ನಡ ಚಲನ ಚಿತ್ರದ ಬಗ್ಗೆ ಖಂಡಿತ ಅಲ್ಲ. ಹೈದರಾಬಾದ್ ಕರ್ನಾಟಕ ವೆಂಬ ಬಳ್ಳಿಗೆ ಹಬ್ಬಿ ಕೊಂಡಿರುವ ರಾಯಚೂರು ಮತ್ತು ಕಲಬುರಗಿ ನಗರಗಳ ಅವಿನಾಭಾವ ಸಂಬಂಧದ ಬಗ್ಗೆ ಒಂದಷ್ಟು ಸಂಗತಿ ಹಂಚಿಕೊಳ್ಳುವ ಇರಾದೆ ನನ್ನದು. ಹಾಗೇ ನೋಡಿದರೆ, ಬೀದರ, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಾದರೂ, ಕಲಬುರಗಿ ಯ ಜೊತೆ ಬಳ್ಳಾರಿ, ಕೊಪ್ಪಳದ ನಂಟು ಅಷ್ಟಕಷ್ಟೆ. ಬೀದರ, ಯಾದಗಿರಿ ಪರವಾಗಿಲ್ಲ ಅನ್ನಬಹುದು. ಆಡಳಿತಾತ್ಮಕ ಕಾರಣದಿಂದಾಗಿ ಕಲಬುರಗಿ ಬೇಕೆ ಹೊರತು ಇನ್ನಿತರ ಕಾರಣಗಳಿಗಾಗಿ ಬಳ್ಳಾರಿ ಬೆಂಗಳೂರು ಮುಖ ಮಾಡಿದರೆ, ಕೊಪ್ಪಳ ಹುಬ್ಬಳ್ಳಿಯತ್ತ ತನ್ನ ಚಿತ್ತ ಹರಿಸುತ್ತದೆ. ಆದರೆ, ರಾಯಚೂರು ಮತ್ತು ಕಲಬುರಗಿ ಭಾವನಾತ್ಮಕ ವಾಗಿ ಬಹಳ ಬಲವಾಗಿ ಬೆಸೆದುಕೊಂಡಿವೆ. ಸ್ವಲ್ಪ ಅಸಮಾಧಾನ ಇದ್ದರೂ, ಕಲಬುರಗಿಯ ಅಭಿವೃದ್ಧಿ ಯ ಪಥಕ್ಕೆ ರಾಯಚೂರಿನದ್ದು ತಕರಾರಿಲ್ಲದ ಮೌನ ಅಂಗಿಕಾರ. ಇವೆರಡು ನಗರ ಮಧ್ಯೆ ಪ್ರಯಾಣಿಕರ ಸಾಂದ್ರತೆ ಎಷ್ಟಿದೆಯೆಂದರೆ, DEMU ರೈಲು ತುಂಬಿ ತುಳುಕುತ್ತಿರುತ್ತದೆ. ಇನ್ನೊಂದಯ DEMUನಷ್ಟು ಜನ ಇನ್ನಿತರ ರೈಲುಗಳ ಮುಖೇನ ತಲುಪುತ್ತಾರೆ. ನನಗಿನ್ನು ನೆನಪಿದೆ, ಕಲಬುರಗಿಯಲ್ಲಿ ಮಳೆ ಬಂದರೆ ರಾಯಚೂರಿನಲ್ಲಿ ಕೊಡೆ ಹಿಡಿಯುವಷ್ಟರ ಮಟ್ಟಿಗೆ ಬೆಸೆತ ಇವುಗಳದ್ದು ಎಂದು ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ನೂರಾರು ನೌಕರರು ಎರಡು ಕಡೆಯಿಂದ ಓಡಾಡುವ ದೃಶ್ಯ ಸಾಮಾನ್ಯ. ರಾಯಚೂರಿನಿಂದ ಕಲಬುರಗಿ ಗೆ ಬರಲು ರೈಲುಗಳ ಸಮಯ ಅನುಕೂಲಕರ. ಆದರೆ, ಕಲಬುರಗಿಯಿಂದ ಬೆಳಗಿನ ಒಂದೆರಡು ರೈಲುಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲಾ ರೈಲುಗಳ ಸಮಯ ನಿತ್ಯ ಓಡಾಡುವವರಿಗೆ ಸ್ವಲ್ಪ ಕಷ್ಟ. ಈ ಹಿಂದೆ, ಕಲಬುರಗಿ ಗೆ ನೀರಿನ ಅಭಾವ ತಲೆದೂರಿದಾಗ, ಆಗಿನ ರೈಲು ಮಂತ್ರಿಗಳಾಗಿದ್ದ ಶ್ರೀ ಜಾಫರ್  ಷರೀಫ್ ರವರು ರೈಲಿನ ಮುಖಾಂತರ ತುಂಗಭದ್ರಾ ನದಿಯ ನೀರನ್ನು ಪೂರೈಸಿದ್ದನ್ನು ಅದು ಹೇಗೆ ಮರೆಯಲು ಸಾಧ್ಯ. ಇವೆರಡು ನಗರಗಳ ಮಧ್ಯೆ ಲೆಕ್ಕವಿಲ್ಲದಷ್ಟು ಮದುವೆ ಸಂಭಂಧಗಳು ಬೆಸೆದುಕೊಂಡಿವೆ. ಮಂತ್ರಾಲಯದ ಶ್ರೀ ರಾಘವೇಂದ್ರರ ದರ್ಶನಕ್ಕೆ ಇಲ್ಲಿನವರು ರಜಾ ದಿನಗಳಲ್ಲಿ ಅತ್ತ ದೌಡಾಯಿಸಿದರೆ, ಗಾಣಗಾಪೂರದ ಶ್ರೀ ದತ್ತಾತ್ರೇಯರ, ಶ್ರೀ ಶರಣ ಬಸವೇಶ್ವರರ, ಶ್ರೀ ಬಂದೆ ನವಾಜ್ ರ ದರ್ಶನಕ್ಕೆ ರಾಯಚೂರಿಗರ ಕಲಬುರಗಿ ಗೆ ದಾಂಗುಡಿಯನ್ನು ನಾವು ನೋಡ ಬಹುದು. ಒಟ್ಟಾರೆ, ಕಲಬುರಗಿ ಯನ್ನು ತನ್ನ ದೊಡ್ಡಣ್ಣ ಎಂದು ಪ್ರಾಂಜಲವಾಗಿ ಒಪ್ಪಿ ಕೊಂಡಿರುವ ರಾಯಚೂರು ಕೈಗಾರಿಕಾ ಕ್ಷೇತ್ರದಲ್ಲಿ ದೊಡ್ಡಣ್ಣನನ್ನು ಮೀರಿಸಿದೆ. ರಾಜ್ಯಕ್ಕೇನೆ ವಿದ್ಯುತ್ ಪೂರೈದುವ ಥರ್ಮಲ್ ಉತ್ಪಾದನಾ ಘಟಕ ಸೇರಿಕೊಂಡಂತೆ ಹಲವಾರು ಕಾರ್ಖಾನೆಗಳು ಇಲ್ಲಿವೆ. ಇಷ್ಟರಲ್ಲಿಯೆ, BHEL ಕಾರ್ಖಾನೆ ಆರಂಭಗೊಳ್ಳಲಿದೆ. ಯಾವುದೇ ವಿರಸವಿಲ್ಲದೆ ಈ ಎರಡು ಅಣ್ತಮ್ಮಗಳು ಇರುತ್ತಿರುವುದು ಖುಷಿ ನೀಡುವ ಸಂಗತಿ.

ಆರತಿ ಮಾಡುವೆ

ಆರತಿ ಮಾಡುವೆ:-

ಆರತೀ ಮಾಡುವೆ,,,,,ನಾಗಿರಿಧರಗೆ,,,,ಶ್ರೀನರಹರಿಗೆ,,,,,,,ಶರಣಾಗತ ಪರಿಪಾಲನಿಗೆ ಆರತಿ ಮಾಡುವೆ' ಈ ಆರತಿಯ ಹಾಡನ್ನು ಅಭಿಲಾಷೆಯ ಮೇರೆಗೆ ಸುಶ್ರಾವ್ಯ ಶಾರಿರದಲ್ಲಿ ಹಾಡಿದವರೆ

ಈಕೆ ಸುಧಕ್ಕ,,,,,ವರಸೆಯಲ್ಲಿ  ನನಗೆ ಅಕ್ಕ ಅದರಲ್ಲಿ ಎರಡು ಮಾತಿಲ್ಲ. ನಮ್ಮಕ್ಕನ ಜನನಿ ಬೇರೆ(ನನ್ನ  ತಾಯಿಯ ಅಕ್ಕ ದೊಡ್ಡಮ್ಮನ ಮಗಳು)ಎಂಬ ಸತ್ಯದ ಅರಿವು ನನಗಾಗಿದ್ದುದು ನನಗೆ 'ಏನು, ಯಾಕೇ, ಎತ್ತ' ಎಂಬ ಪ್ರಶ್ನೆಗಳನ್ನು ಹಾಕುವ ಪ್ರಜ್ಞೆ ಮೂಡಿದಾಗ. ಅದನ್ನ ಬಿಟ್ರೆ,,,,,ಒಡ ಹುಟ್ಟಿದ ಅಕ್ಕ ಅಲ್ಲ ಎಂಬ ಭಾವನೆಯನ್ನು ನನಗೆ ಮೂಡದ ಹಾಗೆ ಬಾಳಿ ಬದುಕಿ ೨೦೧೪ರ ಅಗಸ್ಟ ತಿಂಗಳಲ್ಲಿ ಶ್ರೀಹರಿಯ ಪಾದ ಸೇರಿದ ಜೀವ ಈ ನನ್ನಕ್ಕ. ನಮ್ಮ ತಾಯಿಯ ತಂದೆ ಭೀಮ ಭಟ್ಟರನ್ನು ನೋಡಿಕೊಳ್ಳಲು ಮುದಗಲ್ ನಲ್ಲಿ ವಾಸವಿದ್ದ ಸುಧಕ್ಕ ನನಗೆ ಆಪ್ತ ಸಖಿಗಿಂತಲೂ ಹೆಚ್ಚು. ಅನಿವಾರ್ಯ ಕಾರಣಗಳಿಂದ ಮುದಗಲ್ ನಲ್ಲಿ ವಾಸಿಸುವ ದಿನಗಳಲ್ಲಿ ನನ್ನನ್ನು ಅಂಗೈನಲ್ಲಿ ಹಿಡಿದುಕೊಂಡು ಜೋಪಾನ ಮಾಡಿದ ಜೀವ ನನ್ನಕ್ಕ.  ಈಕೆಯದದ್ದು ಭರಪೂರ ಪ್ರೀತಿ. ಸುಧಕ್ಕನ ಪ್ರಭಾವಳಿ ನನ್ನ ಮೇಲೆ ಢಾಳಾಗಿದೆ‌. ಈಕೆಗೆ ನಾನು ಅಚ್ಚಿಯ(ಅಬೂಚಿ)ಮಗ ತಮ್ಮನಾದರೂ, ರಕ್ತ ಹಂಚಿಕೊಂಡು ಹುಟ್ಟಿದ ತಮ್ಮನಿಗಿಂತ ಒಂದ ಗುಲಗಂಜಿ ತೂಕ ಹೆಚ್ಚಿಗೆ ಕೊಟ್ಟಾಕೆ. ಬಹಳ ಅಃತಕರಣದ ಜೀವ‌. ಸದಾ ಕಣ್ಣಿರು ಧುಮ್ಮಿಕ್ಕಲು ಸಿದ್ಧವಾಗಿರುವ ಬಟ್ಟಲುಗಣ್ಣುಗಳು. ಹಣೆಗೆ ಢಾಳಾದ ಕುಂಕುಮ. ಸದಾ ತುಂಟ ನಗೆ ಸೂಸುವ ಮುಖಾರವಿಂದ and what not.  ಸೋದರ ಮಾವನನ್ನೇ ವರಿಸಿ ಹೈದ್ರಾಬಾದ್ ಸೇರಿಕೊಂಡಿದ್ದ ಸುಧಕ್ಕನೊಂದಿಗೆ ನನ್ನ ಸಂಪರ್ಕ ನಿರಂತರ. ಒಂದ್ವೇಳೆ, ಯಾವುದೋ ಕಾರಣಕ್ಕೆ ಫೋನಾಯಿಸಲು ಆಗದ ಸಂಧರ್ಭದಲ್ಲಿ ಸುಧಕ್ಕನ ಫೋನ್ ಬಂದೆ ಬರುತ್ತಿತ್ತು. 'ಕೆಲ್ಸ ಬಾಳದೇನು ಯಂಕಪ್ಪ ಅದಕಾ ಫೋನ್ ಮಾಡಲು ಮರ್ತಿದಿ' ಎನ್ನುತ್ತಲೆ ಗಂಟೆಗಟ್ಟಲೆ ಹರಟುತಿದ್ದ ನಮ್ಮಕ್ಕ ಈಗ ನೆನಪು ಮಾತ್ರ. ಅಚ್ಚಿ(ನಮ್ತಾಯಿ ಸೀತಾಬಾಯಿ)ಯ ಮಕ್ಕಳು ನೀವೆಲ್ಲಾ ಭಾಳಾ ಶ್ಯಾಣ್ಯಾರು ಎನ್ನುತ್ತ ನಮ್ಮ ,I.Q,ನ್ನು ಮುಕ್ತ ಕಂಠದಿಂದ ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಿದ್ದ ಪರಿ ಅನನ್ಯ.  ನಮ್ಮ ಮನೆಯ ಎಲ್ಲ ಕಾರ್ಯಕ್ರಮದಲ್ಲಿ ಸುಧಕ್ಕನ ಓಡಾಟ ಒಂಥರಾ rule of the day. ಆ ದೇವರು ಅಃತಕರಣದ ಜೀವಗಳನ್ನು ಬೇಗನೆ ತನ್ನ ಬಳಿಗೆ ಕರೆಸಿಕೊಳ್ತಾನೆ ಎಂಬ ಮಾತನ್ನು ದಿಟವಾಗಿಸಿದ ಸುಧಕ್ಕ ಮಾರಣಾಂತಿಕ ಕ್ಯಾನ್ಸರ್ ಗೆ ಬಲಿಯಾಗೀಯೆ ನೆನಪಾಗಿ ಉಳಿದಳು. ಆಕೆ, ತನ್ನ ಅಂತಿಮ ದಿನಗಳಲ್ಲಿ ನನ್ನನ್ನು ಭಾಳಾ ನೆನೆಸುತಿದ್ದ ಕಾರಣ ನಮ್ಮ ಮಾವಾ ಅವರ ಅಣತಿಯಂತೆ ಮೇಲಿಂದ ಮೇಲೆ ಹೈದರಾಬಾದ್ ಗೆ ಹೋಗಿ ಬರುತಿದ್ದೆ‌‌. ಕೊನೆಗೂ, ಜವರಾಯ ತನ್ನ ಪಾಶ ಬೀಸಿ ನನ್ನಕ್ಕನ್ನು ಕರೆದೊಯ್ದೆ ಬಿಟ್ಟ.  ಮೂವರು ಮಕ್ಕಳಲ್ಲಿ ಇಬ್ಬರ ಲಗ್ನವನ್ನು ಮಾತ್ರ ಆಕೆ ಕಂಡಳು. ಕೊನೆಯ ಮಗನ ಮದುವೆ ಆಮೇಲಾಯಿತು. ನಂಮಾಂವ,ಹನುಮಂತರಾವ್ ಕುಲಕರ್ಣಿ ನಾನು ಹೈದರಾಬಾದ್ ಗೆ ಭೇಟಿ ಕೊಟ್ಟಾಗೆಲ್ಲಾ ಕಣ್ಣಿರಾಗುತ್ತಾರೆ. ಅದ್ಯಾಕೋ, ಈ ಕ್ಯಾನ್ಸರ್ ರೋಗ ಲಿಂಗ್ಸೂರಿನ ನಮ್ಮ ತಾಯಿ ತವರು ಮನೆಯ ಹಲವಾರು ಜೀವಗಳನ್ನು ಕಸಿದುಕೊಂಡಿದೆ. ಇಂದಿಗೂ, ಕನಸಿನಲ್ಲಿ ಬಂದು ನನ್ನನ್ನು ಮಾತಿಗೆಳೆಯುವ ಸುಧಕ್ಕನ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. I miss you ಅಕ್ಕ,,,,,,

ವಾರಾನ್ನ

ವಾರಾನ್ನ:

ಇದೇನಿದು ವಾರಾನ್ನ ಅಂತ ನಿಮ್ಮ ಹುಬ್ಬುಗಳು ಮೇಲೆಳುವುದು ಸಹಜ.  ಇದೊಂದು  ನಗರಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ    ಅವರ ತುತ್ತಿನ ಚೀಲವನ್ನು ತುಂಬುವ ವ್ಯವಸ್ಥೆ ನಮ್ಮ ಬಾಲ್ಯದ  ದಿನಗಳಲ್ಲಿ ೬೦-೭೦ ದಶಕ(ವಿಶೇಷವಾಗಿ ಬ್ರಾಹ್ಮಣ ರಲ್ಲಿ) ಜಾರಿಯಲ್ಲಿತ್ತು. ಹಳ್ಳಿ ಪ್ರದೇಶಗಳಿಂದ ಓದಲು ನಗರಕ್ಕೆ ಬಂದ ವಿದ್ಯಾರ್ಥಿಗಳ  ಊಟದ ಖರ್ಚನ್ನೂ ಸಹ ನಿರ್ವಹಿಸದಷ್ಟು ಆರ್ಥಿಕ ಶಕ್ತಿ ಇಲ್ಲದ ಪೋಷಕರು ಶರಣು ಹೋಗುತ್ತಿದ್ದುದೇ ಈ ವಾರಾನ್ನ ವ್ಯವಸ್ಥೆಗೆ. ವಾರದ ಏಳು ದಿನಗಳನ್ನು ನಿತ್ಯ ಒಂದು ಮನೆಯಂತೆ ಏಳು ಸ್ಥಿತಿವಂತರ ಮನೆಗಳಲ್ಲಿ ಈ ಹುಡುಗರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಿ ಪೋಷಕರು ಅವರ ಓದಿಗೆ ಅನುವು ಮಾಡಿ ಕೊಡುತ್ತಿದ್ದರು. ವಾರಾನ್ನ ನೀಡುವ ಮನೆಯವರು ಸಹ ನಿತ್ಯವೂ ನಾಲ್ಕಾರು ಹುಡುಗರಿಗೆ ತಮ್ಮ ಮನೆಯ ಮಕ್ಕಳಂತೆ ಭಾವಿಸಿ ಎರಡು ಹೊತ್ತಿನ ಊಟ ಮತ್ತು ಫಳಾರ ನೀಡುತ್ತಿದ್ದ ಅನ್ನಪೂರ್ಣೆ ರೂಪದ ಪ್ರಾತಃಸ್ಮರಣೀಯನ್ನು ನಾನು ನೋಡಿದ್ದೇನೆ. ವಾರಾನ್ನಕ್ಕೆ ಬರುವ ಹುಡುಗರು ಸಹ, ಯಾವುದೇ ಬಲವಂತವಿಲ್ಲದೆ, ವಾರಾನ್ನದ ಮನೆಗೆ ಮುಂಚೆಯೇ ಬಂದು ಅವರ ಮನೆಯ ಸದಸ್ಯನ ಹಾಗೆ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ಕೊಡುವುದು ರೂಢಿಯಲ್ಲಿತ್ತು. ಹೀಗೆ ವಾರಾನ್ನ ಪದ್ಧತಿಯಲ್ಲಿ ಶಿಕ್ಷಣ ಪಡೆದು ಜೀವನದಲ್ಲಿ ಅಭ್ಯುದಯ ಸಾಧಿಸಿದ ವ್ಯಕ್ತಿಗಳು ಗಣನೀಯ. ಇಂದಿಗೂ ಸಹ ವಾರಾನ್ನ ನೀಡಿದ ಮನೆಗೆ ಭೇಟಿ ನೀಡಿ ಕೃತಜ್ಞತೆ ತೋರಿಸುತ್ತಾರೆ. ಹೀಗೆ, ಮನಃಪೂರ್ವಕವಾಗಿ ಅನ್ಯರ ಮಕ್ಕಳಿಗೆ ಅನ್ನ ನೀಡುವ ಅನ್ನಪೂರ್ಣೆಯರು ಈಗಿನ ಕಾಲಘಟ್ಟದಲ್ಲಿ ವಿರಳಾತಿ ವಿರಳ. ಅಥವಾ, ಈಗ ವಾರಾನ್ಯ ಪದ್ಧತಿಯೇ ಅದೃಶ್ಯವಾಗಿರುವ ಕಾರಣ, ವಾರಾನ್ನ ನೀಡಲು ಸಿದ್ಧರಿದ್ದರು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಬೇಕಲ್ಲ. ಅವರನ್ನೆಲ್ಲಿಂದ ತರುವುದು. ಪ್ರತಿಫಲಾಪೆಕ್ಷೆ ಇಲ್ಲದೆ ಅನ್ನ ನೀಡಿ  ಬಡ ವಿದ್ಯಾರ್ಥಿಗಳ ವ್ಯಾಸಂಗೆ ನೆರವಾಗುತ್ತಿದ್ದ ಈ ಪದ್ಧತಿ ಮಾಯವಾಗಲು ಆರ್ಥಿಕ ಶಕ್ತಿ ಸುಧಾರಿಸಿದೇ ಅನ್ನ ಬೇಕೆ, ಅಷ್ಟು ಉದಾರ ಮನಸ್ಸಿನ ಕುಟುಂಬಗಳು ಈಗಿಲ್ಲ ಎನ್ನ ಬೇಕೆ ಅಥವಾ ಎಲ್ಲದಕ್ಕೂ ಮಿಗಿಲಾಗಿ ವಾರಾನ್ನ ಸ್ವೀಕರಿಸಲು ಈಗಿನ ಹುಡುಗರ ಮನಸ್ಥಿತಿ ಒಪ್ಪುತ್ತಿಲ್ಲವೇ,,,,,ಗೊಂದಲದಲ್ಲಿದ್ದೇನೆ,,,,,,ಬಲ್ಲವರು ಬೆಳಕು ಚೆಲ್ಲಿ,,,,,

ಕೇಳಿರಿ ಸವ೯ ಮಾನ್ಯರೇ

ಕೇಳಿರಿ ಸರ್ವ ಮಾನ್ಯರೆ,,,,,


ಕೇಳಿರಿ ಸರ್ವ ಮಾನ್ಯರೆ,,,,ಈ ದಿನ ಅಮರ ಟಾಕೀಸ್ ನಲ್ಲಿ ಭಯಂಕರ ಮಾರಾಮಾರಿ ಕನ್ನಡ ಚಿತ್ರ ದೇವರ ಮಕ್ಕಳು,,,,ಹಿಂಗ ಭುಂಗಾ ಹಿಡಕೊಂಡು ಸಾರಿಕೋತ ಹೋಗೋದು ನಮ್ ಮದಗಲ್ನಲ್ಲಿ ಸದಾ ಕಾಣುವ ದೃಶ್ಯ. ಅದು ೧೯೭೦ ರ ಕಾಲ ಘಟ್ಟ ಇರ ಬೇಕು.ನಮ್ಮೂರಾಗ ಇದ್ದದ್ದ ಒಂದು  ಅಮರ ಟಾಕೀಸ. ಇಲ್ಲಿ ಹೆಂಗಸರಿಗೆ ಮಾತ್ರ ಬಾಲ್ಕನಿ. ಅಲ್ಲಿ ಕುರ್ಚಿ ಇದ್ವು ಅಂತಾ ತಿಳ್ಕೊಬ್ಯಾಡ್ರಿ. ಹಾಸಿದ ಜಮಖಾನದ ಮ್ಯಾಲೆ ಕುಂತು ಸಿನಿಮಾ ನೋಡ್ಬೇಕಾಗಿತ್ತು. ನಮ್ಮಮ್ಮ, 'ಸಂಜಿಮುಂದ ಸಿನಿಮಾಕ್ಕ ಹೋಗೂದದ ಅಂತ್ಹೇಳಿ ನಮ್ಮನ್ನ ಮಲಗಸ್ತಿದ್ಲು. ಮಕ್ಕಳಿಗೆ ಉಚಿತ ಪ್ರವೇಶದ ಕಾರಣ ನನ್ನನ್ನ ತಾನು ಭುಜದ ಮ್ಯಾಲೆ ಮಲಗ್ಸಿಸಿಕೊಂಡು, ನನ್ನ ತಮ್ಮನ್ನ ಗೆಳತಿಯ ಭುಜದ ಮ್ಯಾಲೆ ಹೊರ್ಸಿ ಆಗ್ಲೆ ಮಕ್ಳ ಉಚಿತ ಪ್ರವೇಶದ ವ್ಯಾಪ್ತಿಯನ್ನು ಮೀರಿದ ನಮ್ಮನ್ನು ಈ ತರಾ ಪ್ಲಾನ ಮಾಡಿ ಗಂಗವ್ವ ಅನ್ನೊ ಗೇಟ ಕೀಪರ್ ನ್ನು ಯಾಮಾರ್ಸಿ ಸಿನಿಮಾ ತೋರಸ್ತಿದ್ಳು. ಕೈವಾರ ಮಹಾತ್ಮೆ, ಸತಿ ಅರುಂಧತಿ, ಪ್ರತಿಧ್ವನಿ ಹೀಗೆ ಹಲವಾರು ಶನಿಮಾಗಳನ್ನ ಮಕ್ಕಳ ಕೋಟಾದಡಿ ನೋಡಿದ್ದೆ. ಈ ಆಟ ಭಾಳ ದಿವ್ಸ ನಡೀಲಿಲ್ಲ. ಮೊದಲಾ ತಾಳಿ ಮರದ್ಹಾಂಗ ಬೆಳವಣಿಗಿ ನಮ್ದು. ಅಮ್ಮನ ಭುಜವನ್ನು ನನ್ನ ಇನ್ನೊಬ್ಬ ತಮ್ಮ,ತಂಗಿ ಆಕ್ರಮಿಸಿದರು. ನಮಗ,,,,,ಮತ್ತೇನು ನಾಲ್ಕಾಣೆಯ ನೆಲಾನೇ ಗತಿ. ಅಲ್ಲಿ ನೆಲದ ಮ್ಯಾಲೆ ಮಕ್ಕೊಂಡು ಆಜು-ಬಾಜು ಇರೋ ಕಂಬಗಳಿಂದ ಪರದಿಗೆ ಅಡ್ಡ ಬರದಾಂಗ ಜಾಗ ಹುಡುಕೊತಿದ್ದೆ. ಅಲ್ಲಿ, ಫ್ಯಾನ್ ಚಾಲು ಇದ್ರ ಓಕೆ,,,,ಇಲ್ಲಂದ್ರ 'ಪಂಕಲೇ ನಿಮ್ಮವೌನ' ಅಂತಾ ಕೆಟ್ಟ ದನಿಲೇ ಕೂಗಿದ ಮ್ಯಾಲ ಆ ಪಂಕ ತಿರುಗುತ್ತಿತ್ತು. ಆಗೆಲ್ಲ, ಒಂದೆ projectorನ ದಿನಗಳು. ಪ್ರತಿ ಅರ್ಧ ತಾಸಿಗೊಮ್ಮೆ ರಸಭಂಗ ನಿಶ್ಚಿತ. ರೀಲ ಬದಲಿಸಿ ಚಾಲು ಮಾಡೂತನ ಮತ್ತಷ್ಟು ಸೀಟಿ, ಕೆಟ್ಟ ದನಿಲೇ ಒದರೂದು, ಬಯ್ಯೊದು ಇರ್ತತಿತ್ತು. ರಾಜ್ಕುಮಾರ್ ಖಳನಾಯನಿಗೆ ಫೈಟಿಂಗ ಸೀನ್  ನಲ್ಲಿ ಹೊಡೆಯುವಾಗ ಬರುತ್ತಿದ್ದ 'ಡಿಶುಂ' ಶಬ್ದಕ್ಕೆ ನಮ್ಮ ಮನ ಪುಳಕಿತವಾಗುತ್ತಿತ್ತು. ಆಗಾಗ 'ಭಪ್ಪರೆ,,,,ಶಹಾಬ್ಬಾಸ' ಎಂಬ ಉದ್ಗಾರಗಳು ಬೇರೆ. ಬಂಗಾರದ ಮನುಷ್ಯ ಚಿತ್ರದ ಕೊನೆ ದೃಶ್ಯದಲ್ಲಿ ಭಾರತಿಯವರು ಭಾವಿಗೆ ಬಿದ್ದ ನಂತರದ  ಚಟ್ಟ ಸಿದ್ಧತೆಯ ದೃಶ್ಯ ಬಂದಾಗ ಇಡೀ ಟಾಕೀಸ್ ನಲ್ಲಿ  ನೀರವ ಮೌನ.ಎಲ್ಲರೊಂದಿಗೆ ನಾನೂ ಭರಪೂರ ಅತ್ತಿದ್ದೆ. ಜನರೇಟರ್ ಇರದ ಕಾರಣ ಕರೆಂಟ ಹೋದ ಸಮಯದಲ್ಲಿ ಮನೆಗೆ ದೌಡಾಯಿಸಿ ನಮ್ಮ ಮುತ್ಯಾನ ಬಳಿ ಇಂಟರವಲ್ ನಲ್ಲಿ ಶೆಂಗಾ ತಿನ್ಲಿಕ್ಕೆ ರೊಕ್ಕ ವಸೂಲ್ಮಾಡತಿದ್ದೆ. ಕರೆಂಟ ಬಂದಾಕ್ಷಾಣ ಹೋ ಎಂದು ಅರಚುತ್ತ ಟಾಕೀಸನತ್ತ ಓಡುತ್ತಿದ್ದೆ. ಇಂಟರವಲ್ ನಲ್ಲಿ ಆಗೆಲ್ಲ, ತೋರಸ್ತಾ ಇರೋ ಸಿನೆಮಾದ ಕಥೆ, ಹಾಡುಗಳು ನಾಯಕ, ನಾಯಕಿರಿರುವ ಪುಸ್ತಕ ಮಾರುತ್ತಿದ್ರು. ತೋಗೋಳಕ್ಕ ನಮ್ಹತ್ರ ರೊಕ್ಕ ಇರ್ತಿದಿಲ್ಲ. ಆಸಿಬುರಕ ಕಣ್ಣಿನಿಂದ ನೋಡ್ತಿದ್ದ ನಮಗ ' ನೋಡಿ ಕೋಡು' ಅಂತಾ ಕೆಲವ್ರು ಉದಾರಿಗಳ್ತಾ ಇದ್ರು. ಆಗ ನಮಗ ಸ್ವರ್ಗಕ್ಕ ಮೂರ ಗೇಣು. ನಮಗ ರೊಕ್ಕ ಸಿಗ್ತಿದ್ದು ಬರೀ ಕನ್ನಡ ಸಿನಿಮಾಗಳಿಗೆ ಅದೂ ಎರಡ್ತಿಂಗಳಿಗೆ ಒಂದರ್ಹಂಗ. ಹಿಂದಿ ಸಿನಿಮಾಕ್ಕ,,,,,ನನ್ನ ದೋಸ್ತ್ ಸುರೇಶ ಶೆಟ್ಟಿನೆ sponsorಮಾಡ್ತಿದ್ದ. ನಮ್ಮಮ್ಮ ನಮ್ಮ ಜಾಸ್ತಿ ಸಿನಿಮಾ ನೋಡೋ ಚಪಲಕ್ಕ ಭಾಳ ಬ್ಯಾಸರಾ ಮಾಡ್ಕೊತಿದ್ಳು. ರಾತ್ರಿ ಊಟಕ್ಕ ಹಾಕೋವಾಗ ಎರಡು ಕಣ್ಣಿನಿಂದ ನೀರು ಸುರಿಸ್ತಾ 'ಅಲ್ಲಿ ನಿಮ್ಮಪ್ಪ ನಿಮ್ಸಲುವಾಗಿ ದುಡಿತಾನ,,,,ಇಲ್ಲಿ ನೀವು ಸಿನಿಮಾ ನೋಡ್ತಾ ಹಾಳಾಗ್ತೀರಿ,,,,,, ಅನ್ನಕ್ಕ ಯಾವಾಗ ಹತ್ತೊದು' ಅಂತಾ ಬೈತಿದ್ಳು. ಆ ಕ್ಷಣದಲ್ಲಿ, ತುಂಬಾ ಕಸಿವಿಸಿಯಾಗಿ ಇನ್ನೊಮ್ಮೆ ಸಿನಿಮಾಕ್ಕ ಹೋಗಾ ಬಾರ್ದು ಅನಸ್ತಿತ್ತು. ಆದರ, ಮತ್ತದೆ ಹಾಡು ಅದೇ  ರಾಗ. ನಮ್ಮಪ್ಪಂತು,,,,, ಮಕ್ಕಳ ಮ್ಯಾಲೆ ಘನ ಪ್ರೀತಿ ಆತಗ. ನನ್ಮಕ್ಳು ಧಡ್ಢ್ರಾಗುದಿಲ್ಲ ನೋಡ್ತಿರು' ಅಂದು ಅಮ್ಮನ ದೂರುಗಳೆಲ್ಲಾ ಒಂದಾ ಸಿಟಿಂಗ್ನಲ್ಲಿ ಡಿಸ್ಮಿಸ್ ಆಗ್ತಿದ್ವು. ಕಾಲ ಸರಿದಂತೆ ನಾವೆಲ್ಲ ಅಪ್ಪ ಹೇಳಿದಂತೆ ಶ್ಯಾಣಾರಾಗಿ ಅಮ್ಮನ ಹಾರೈಕೆಯಂತೆ ಅನ್ನಕ್ಕ ಹತ್ತಿವಿ. ಆದರ, ನಮ್ಮ ಅಭ್ಯುದಯನಾ ನೋಡಿ ಹಿರಿ ಹಿರಿ ಹಿಗ್ಗ ಬೇಕಿದ್ದ ಅಪ್ಪ ಅಮ್ಮಾ ಜಲ್ದೀನಾ ಶ್ರೀಹರಿ ಪಾದಾ ಸೇರ್ಕೊಂಡ್ರು. ಇತ್ತೀಚೆಗೆ ಮುದಗಲ್ ಗೆ ಹೋದಾಗ ದಂಗಾಗಿ ಹೋದೆ. ನನ್ನ ಪ್ರಿಯ ಅಮರ ಟಾಕೀಸ ನೆಲಸಮವಾಗಿ ಅಲ್ಲಿ ವಾಣಿಜ್ಯ ಸಂಕೀರ್ಣ ತಲೆ ಎತ್ತಿತ್ತು. ಮತ್ತಾ ಸಿನಿಮಾ ಹ್ಯಾಂಗೋ ಅಂದರ,,,,,ದೋಸ್ತ್ ಸುರೇಶ ಹೇಳ್ದ,,,,ಟಿವ್ಯಾಗೇನು ಸಿನಿಮಾಕ ಬರ ಬಂದದೇನು. ಅಷ್ಟಕ್ಕೂ ನೋಡ್ಬೇಕು ಅನ್ಸಿದ್ರ,,,,ಇಳಕಲ್, ಗಂಗಾವತಿ, ಲಿಂಗ್ಸೂರು, ರಾಯ್ಚೂರು ಗಳಿಗೆ ಹೋದಾಗ ನೋಡ್ತಿವಿ ಅಂದ.  ಅದರೂ, ಅಮರ ಟಾಕೀಸ್ ನಲ್ಲಿ ನೆಲದ ಮ್ಯಾಲ ಮಲ್ಕೊಂಡು ನೋಡಿದ ಮಜಾ ನಮ್ ಕಲಬುರಗಿ ಅಥ್ವಾ ಬೆಂಗಳೂರ್ನ ಯಾವ ಮಲ್ಟಿಪ್ಲೆಕ್ಸ್ ನ್ಯಾಗು ಬರಾಣಿಲ್ಲ.

ಕುಂಟ ಮಾಸ್ತರ್

ಕುಂಟ ಮಾಸ್ತರ್:

ಅದು ೭೦ರ ದಶಕದ ರಾಯಚೂರಿನಲ್ಲಿ ಕಳೆದ ದಿನಗಳು.ನನಗಾಗ ೧೦ ವರ್ಷವಿರಬೇಕು. ಪ್ರಾಥಮಿಕ ವಿದ್ಯಾಭ್ಯಾಸದ ಕಾಲಘಟ್ಟ. ಆಗ, ರಾಯಚೂರಿನಲ್ಲಿ ಒಂದು ಅಲಿಖಿತ ನಿಯಮ ಇತ್ತು. ಹುಡುಗರು ಶ್ಯಾಣಾ ಆಗಬೇಕಂದರ, ಕುಂಟ-ಮಾಸ್ತರ ಕಡಿಂದ ಟ್ಯೂಷನ್ ಹೇಳ್ಸೋದು. ಮಾಸ್ಟರ್ ಹೆಸರು ನನಗ ನೆನಪಿಲ್ಲ. ಬಿಳಿ ಕುರ್ತಾ ಬಿಳಿ ಪೈಜಾಮಾದೊಂದಿಗೆ ಕೈಯಾಗ ಛತ್ರಿ ಹಿಡಕೊಂಡು ಕುಂಟುತ್ತ ಬರ್ತಾ ಇದ್ದ ಕಾರಣವೇ ಇರ್ಬೇಕು ಅವರನ್ನ ಕುಂಟ ಮಾಸ್ಟರ್ ಅಂತಾ ಕರಿಲಿಕ್ಕೆ. ಅವರು, ತಾಯಂದಿರಿಗೆ ಮೊದಲಾ ಹೇಳಿರೋರು, 'ಛಡಿ ಛಂ ಛಂ,,,,ವಿದ್ಯಾ ಘಂ ಘಂ,,,,,ನಾ  ಹೇಳಿದ ಪಾಠ ನಿಮ್ಮ ಹುಡುಗ ಸರಿಯಾಗಿ ಒಪ್ಸಲಿಲ್ಲ ಅಂದ್ರ ನಾಲ್ಕ ಬಿಗ್ಯವನಾ,,,,,ನಿಮಗ ಮಗನ ಮ್ಯಾಲೆ ಅಚ್ಛಾ ಇದ್ದರ ನನ್ನ ಕರಿ ಬ್ಯಾಡ್ರಿ'. ಅವರ ಹೊಡತಗಳನ್ನ ನೆನಸಿಗೊಂಡ್ರ ಇವತ್ತಿಗೂ ಮೈ ಜಂ ಅಂತದ. ಜಾಸ್ತಿ ಏಟ ಬಿದ್ದ ದಿನ ಅಮ್ಮಾ ರಮಿಸಿ ಶೆಂಗಾ-ಬೆಲ್ಲ ಕುಟ್ಟಿ ತಿನ್ಲಿಕ್ಕಿ ಕೊಟ್ಟು ತಲಿ ಮ್ಯಾಲೆ ಕೈ ಆಡಸ್ತ ಕಣ್ಣಾಗ ನೀರು ತಂದು ಕೊಂಡು 'ನೀ ಶ್ಯಾಣಾ ಆಗ್ಲಿ ಅಂತ ಹಿಂಗ ಮಾಡಿವಿ,,,,ಮಾಸ್ಟರ್ ಹೊಡಿಯೊ ಮುಂದ ನನಗೂ ಕರುಳು ಹಿಂಡಿದಂಗ್ಹಾಂಗ ಅಗ್ತದ' ಅಂತಾ ಅಮ್ಮ ಹೇಳಾಕಿ. ಆದ್ರೂ, ಮಾಸ್ಟರ್ ಕೊಟ್ಟ ಕಡುಬಿನಿಂದಾನೆ ನಾಲ್ಕ ಅಕ್ಷರ ತಲ್ಯಾಗ ಹೋಗಿ ಅನ್ನಕ್ಕ ಹತ್ತಿದ್ದು ಸುಳ್ಳಲ್ಲ. ಇವತ್ತಿಗೂ, 'ಅವರೇನ್ರಿ ಕುಂಟ ಮಾಸ್ಟರ್ ಹತ್ರ ಕಲ್ತಾರ,,,,ಶ್ಯಾಣಾ ಇರ್ಲಿಕ್ಕೆ ಬೇಕು ಅದರಾಗೇನು ಎರಡ್ನೆ ಮಾತಿಲ್ಲ' ಅನ್ನೋರು. ನನ್ಹಾಂಗ ಮಾಸ್ಟರ್ ಬಳಿ ಏಟ ತಿಂದು ಜೀವನದಾಗ ಮುಂದ ಬಂದವ್ರು ಸಾಕಷ್ಟು ಮಂದಿ ಅದಾರ. ಅವರಿಗೆಲ್ಲ ಕುಂಟ-ಮಾಸ್ತರ ಅಂದ್ರ ಭಾಳಾ ಅಭಿಮಾನ.

ಅಂಬಾ ತನಯ

ಅಂಬಾತನಯ ಹೇರಂಬ ಪೂರ್ಣಕರು-

ಣಾಂಬುಧೇ ತವ ಚರಣಾಂಬುಜಕೆರಗುವೆ 


ದಶನ ಮೋದಕ ಪಾಶಾಂಕುಶ ಪಾಣೇ

ಅಸಮ ಸಹಸಚಾರುದೇಷ್ಣ ವಂದಿಪೆ    


ವೃಂದಾರಕ ವೃಂದ ವಂದಿತ ಚರಣಾರ-

ವಿಂದ ಯುಗಳ ದಯದಿಂದ ತೋರೆನಗೆ


ಯೂಥಪವದನ ಪ್ರದ್ಯೋತಸನ್ನಿಭ ಜಗ-

ನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ.


ಶಿವಮೊಗ್ಗೆಯ ಶ್ರೀ ಶ್ರೀನಿವಾಸ ದಾಸರು ತಮ್ಮ ಕೀರ್ತನೆ ಶುರು ಮಾಡ್ತಾ ಇದ್ದದ್ದು ಈ ಮೇಲಿನ ಶ್ರೀ ಗಣೇಶ ಸ್ತುತಿಯ ಮೂಲಕ. ಅವು ೧೯೭೦ರ ದಶಕದ ಮುದಗಲ್ ನಲ್ಲಿ ಕಳೆದ ಪ್ರಾಥಮೀಕ ಶಾಲಾ ದಿನಗಳು‌‌.ಶ್ರೀನಿವಾಸ ದಾಸರೆಂಬೊ ಹರಿಕೀರ್ತನೆ ಹೇಳುವ ಇವರು ಶಿವಮೊಗ್ಗೆಯಿಂದ ಬಂದು ಮುದಗಲ್ ನಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡುತ್ತಿದ್ದರು. ಮೊದಲು ಅವರು ನಮ್ಮ ತಾತ ಭೀಮಭಟ್ಟರ ಮನೆಯಲ್ಲಿರುತ್ತಿದ್ದರು. ನಂತರದ ವರ್ಷದಲ್ಲಿ ಅವರ ಬಿಡಾರ ಪಿಕಳಿಹಾಳ ರಾಘಪ್ಪರ ಮನೆಗೆ ಸ್ಥಳಾಂತರವಾಯಿತು. ಈ ಒಂದು ತಿಂಗಳು ಅವರು ಶ್ರೀ ನಗರೇಶ್ವರ ದೇವಾಲಯದ ಪ್ರಾಂಗಣದಲ್ಲಿ ರಾತ್ರಿ ೯ರಿಂದ ಸುಮಾರು ಮಧ್ಯರಾತ್ರಿಯ ವರೆಗೆ ನಿತ್ಯವೂ ಕೀರ್ತನೆ ಹೇಳುತ್ತಿದ್ದರು. ಆಕರ್ಷಕ ನಿಲುವು, ಉದ್ದ ಜಡೆಯನ್ನು ಹಿಂದಕ್ಕೆ ಕಟ್ಟುತ್ತಿದ್ದರು. ತಲೆಯ ಮುಂಬಾಗ ಸಂಪೂರ್ಣ ರೋಮರಹಿತ. ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುವಲ್ಲಿ ನಿಸ್ಸಿಮರು. ದಿನವು ಒಬ್ಬರು ಖರ್ಚುಭರಿಸಿ(೨೫ ರೂಪಾಯಿ)ಅವರಿಷ್ಟದ ಅಥವಾ ಕೆಲವೊಮ್ಮೆ ದಾಸರ ವಿವೇಚನೆಯ ಆಯ್ಕೆಯ ಕಥೆ ಇರುತ್ತಿತ್ತು. ಮೊದಲಿಗೆ ಶ್ರೀ ಗಣಪತಿ ವಂದನೆಯೊಂದಿಗೆ ಆರಂಭ. ಒಮ್ಮೊಮ್ಮೆ ಹಿಮ್ಮೆಳ ಅವರ ಇಚ್ಛಾನುಸಾರ ನುಡಿಸುತ್ತಿದ್ದರೆ 'ಅಂಬಾತನಯ' ಹಾಡೆ ಮುಕ್ಕಾಲು ಗಂಟೆಯಾದರೂ ಮುಗಿಯುತ್ತಿರಲಿಲ್ಲ. ಜೊತೆಗೆ ಎರಡೂ ಕಂಗಳಿಂದ ಆನಂದ ಬಾಷ್ಪ. ಹಿಮ್ಮೇಳವನ್ನು ಭೇಷ್, ಭೇಷ್ ಎನ್ನತ್ತಾ ಹುರಿದುಂಬಿಸಿ ಹಾಡುತ್ತಾ ಮೈಮರೆಯುತ್ತಿದ್ದರು. ಅವರ ಆತ್ಮೀಯರು' ದಾಸರ ಹಾಡು ಸಾಕು ಕಥೆ ಚಾಲು ಮಾಡ್ರಿ,,,,ಇನ್ನಾ ಪೀಠಿಕೆನ ಶುರ ಮಾಡಿಲ್ಲ' ಎಂದು ಎಚ್ಚರಿಸಿದಾಗಲೆ ಅವರ ಚಿತ್ತ ಮೊದಲಿಗೆ ಪೀಠಿಕೆಯತ್ತ ಹರಿಯುತ್ತಿತ್ತು. ಲೌಕಿಕ ವಿಷಯಗಳತ್ತ ೪೫ ನಿಮಿಷ ಮಾತಾಡಿ ಅಲ್ಲಿಯೂ ನಾಲ್ಕಾರು ಹಾಡುಗಳು ಹಾಡಿ ನಂತರ ಕಥೆ ಶುರು ಮಾಡುತ್ತಿದ್ದರು. ಅವರ ಕೀರ್ತನದಲ್ಲಿ ನವರಸಗಳು ಭರಪೂರ ತುಂಬಿರುತ್ತಿದ್ದವು.ನಮಗೆ ಸುಗ್ಗಿಯೊ ಸುಗ್ಗಿ. ಆದರೆ, ಪೀಠಿಕೆ ಮುಗಿದು ಕಥೆ ಶುರುವಿನ ಹಂತದಲ್ಲಿಯೇ ರೆಪ್ಪೆಗಳು ಮುಚ್ಚಿ ಅಮ್ಮನ ಮಡಿಲ್ಲಲ್ಲಿ ನಿದ್ರೆಗೆ ಶರಣಾಗುತ್ತಿದ್ದೆ. ಮರುದಿನ ಅಮ್ಮನನ್ನು ಪೀಡಿಸಿ

ಕಥೆ ಕೇಳುತ್ತಿದ್ದೆ. ಪಿಕಳಿಹಾಳ ರಾಘಪ್ಪನವರು ಕೊನೆಯ ಕೀರ್ತನೆಯ ಖರ್ಚನ್ನು ಭರಿಸ್ತಾ ಇದ್ರು. ಅದರೆ, ಈ ಕೊನೆ ಕೀರ್ತನೆ, ಮಧ್ಯೆ ಹಲವರು ಖರ್ಚು  ವಹಿಸಿಕೊಂಡ ಕಾರಣ ಮುಂದೆ ಮುಂದೆ ಹೋಗ್ತಾ ಇತ್ತು. ಒಟ್ಟಾರೆ ಶ್ರೀನಿವಾಸ ದಾಸರ ಕೀರ್ತನೆಯ ದಿನಗಳು ಬಹಳ ಚೇತೋಹಾರಿಯಾಗಿ ಮನಕ್ಕೆ ಮುದ ನೀಡುತ್ತಿದ್ದವು. ಈಗಿನ ಕಾಲ ಘಟ್ಟದಲ್ಲಿ, ಆ ತರಹ ಕೀರ್ತನೆ ಮಾಡವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕೀರ್ತನ ಕಲೆ ಉಳಿದುಕೊಂಡು ಮುಂದಿನ ತಲೆಮಾರಿಗೆ ಸಾಗ ಬೇಕು ಎನ್ನುವುದು ನನ್ನ ಹಾರೈಕೆ.

ಗಿಡ್ಡ ದಾಸರು

ಗಿಡ್ಡ ದಾಸರು: ನಾವು ಬಾಲ್ಯದ ದಿನಗಳಲ್ಲಿ ಈಗಿನ celebrity ಸ್ಥಾನಮಾನ ಪಡೆದಿದ್ದ 'ಗಿಡ್ಡ ದಾಸರು' ಎಂಬ ದಾಸರಿದ್ದರು. ಎತ್ತರ ಕಡಿಮೆ ಇದ್ದ ಕಾರಣ ಗಿಡ್ಡ ದಾಸರು ಎಂಬ ವಿಶೇಷಣದಿಂದಲೆ ಪ್ರಖ್ಯಾತಿಯಾಗಿದ್ದರು. ಸದಾ ಲೋಕ ಸಂಚಾರಿಯಾದ ಇವರು ಮಳಖೇಡದ ಶ್ರೀ ಜಯತೀರ್ಥರ ಆರಾಧನೆ, ಲಿಂಗ್ಸಗೂರಿನ ಶ್ರೀ ವರದೇಂದ್ರರ ಆರಾಧನೆ, ಮಂತ್ರಾಲಯದ ಶ್ರೀ ರಾಘವೇಂದ್ರರ ಆರಾಧನೆ, ಆಹ್ವಾನದ ಮದುವೆ ಮುಂಜಿ ಗಳಿಗೆ ತಪ್ಪದೆ ಹಾಜರ. ಗಿಡ್ಡ ದಾಸರು ಬಂದಾರಂದ್ರ ಆ ಸ್ಥಳ/ಸಮಾರಂಭ ಕಳೆಗುಟ್ಟುತಿತ್ತು. ಬಂದಿಲ್ಲಾಂದರ,,,,ಏನೋ ಕಳಕೊಂಡ ಹಾಗೇ ಅನ್ಸಿತಿತ್ತು.ತಮ್ಮ ಸುಶ್ರಾವ್ಯ ಶಾರಿರದಿಂದ ದಾಸರ ಹಾಡುಗಳನ್ನು ನರ್ತಿಸುತ್ತಲೆ ಹಾಡುವ ಇವರ ಶೈಲಿ ಅನನ್ಯ. ಪುಟ್ಟ ಬಾಲಿಕಿಯರನ್ನು ನನ್ನ ಲಗ್ನಾಗು ಎನ್ನುತ್ತ, ಬಾಲಕರನ್ನು ಕಣ್ಣು ಕಿರಿದು ಮಾಡಿ ಹೆದರಿಸುವ ಪರಿಗೆ ಅಂಜದ ಹುಡಗರೆ ಇದ್ದಿಲ್ಲ. ನಿಶ್ಚಿತ ವರಮಾನದ ಅಭಾವ, ದೈಹಿಕ ಸ್ಥಿತಿಯ ಕಾರಣ ಯಾರೂ ಈ ದಾಸರಿಗೆ ಹೆಣ್ಣು ಕೊಡಲೇ ಇಲ್ಲ. ಇತ್ತೀಚಿನ ಹಲವು ವರ್ಷಗಳಿಂದ ಕಾಣಿಸಿಕೊಂಡಿರದ ಈ ಗಿಡ್ಡ ದಾಸರು, ಬಹುಶಃ ಶ್ರೀ ಹರಿಯ ಪಾದ ಸೇರಿರ ಬಹುದು. ಮರೆಯ ಬೇಕಂದರೂ ಮರೆಯಲಾಗದ ವ್ಯಕ್ತಿತ್ವ ಅವರದ್ದು.

ಸಂತಿ ರೊಕ್ಕ

ಸಂತಿ ರೊಕ್ಕ:೧೯೭೩ರ ಆಸು ಪಾಸಿನ ಕಾಲಘಟ್ಟ ಅದು.

ಮುದಗಲ್ ನಲ್ಲಿ ನಮ್ಮ ಪ್ರಾಥಮಿಕ ಶಿಕ್ಷಣದ ದಿನಗಳವು. ಸುತ್ತಾ ೫೦ ಗ್ರಾಮಗಳಿಗೆ ದೊಡ್ಡೂರು ಮುದಗಲ್. ಸೋಮವಾರ ಸಂತಿ ಇರ್ತದ. ನಮ್ ತಾತ ಭೀಮ್ ಭಟ್ ಜೋಶಿ ಅವರ ಮನೆಯಲ್ಲಿ ನಮ್ಮ ವಾಸ್ತವ್ಯ. ತಾತ ವೈದಿಕ ಬ್ರಾಹ್ಮಣರು ಮತ್ತು ಜೋಯಿಸರು. ಪ್ರತಿ ಸೋಮವಾರ ಪಿಕಳಿಹಾಳ್ ನಿಂದ ಗಂಗವ್ವ ಎಂಬುವವರು ವರ್ತ್ನಿ ತುಪ್ಪ ಕೊಡ್ತಿದ್ರು. ನಮ್ ತಾತನ ಮನ್ಯಾಗ,,,,ಬೆಣ್ಣಿ ಕಾಸಿ ಕೊಡ್ತಾ ಇದ್ದ ಪರಿ ಶುದ್ಧ ತುಪ್ಪ ಅದು. ತುಪ್ಪ ಒಂದು  ಹದಕ್ಕೆ ಬಂದಾಗ ಅದರಲ್ಲಿ ವಿಳೆದೆಲೆ ಹಾಕ್ತಾ ಇದ್ರು. ಅದನ್ನು ತಿನ್ಲಿಕ್ಕೆ ನಮ್ಮಲ್ಲಿ ಭಾರಿ ಪೈಪೋಟಿ ಇತ್ತು. ಅದರ ರುಚಿ ಬಲ್ಲವ್ರಿಗೆ ಗೊತ್ತು. ಆಗೆಲ್ಲ,ಮಕ್ಳಿಗೆ ೧೦ ಪೈಸೆ(ಅಥವಾ ಹೆಚ್ಚು)ಸಂತಿ ರೊಕ್ಕ ಅಂತಾ ಕೊಡ್ತಿದ್ರು. ನಾವು, ಮುತ್ಯಾ ಸಂತಿ ರೊಕ್ಕ ಅಂತಾ ಕೈಯೊಡ್ಡಿ ನಿಲ್ತಾ ಇದ್ವು. ಒಂದೆರಡು ತಾಸು ನಿರಂತರ ಕೇಳುವಿಕೆಯ ನಂತರ ೧೦ ಪೈಸಾ ನಾಣ್ಯ ನಮ್ ಕೈಗೆ ಬೀಳುತ್ತಿತ್ತು. ಆಗ ನಮ್ಗೆ, ಸ್ವರ್ಗಕ್ಕೆ ಮೂರೆ ಗೇಣು. ಓಡಿ ಹೋಗಿ ಸಂತಿಯೊಳ್ಗ ಬೆಲ್ಲದ ಜಿಲೇಬಿ, ಬೆಂಡು ಬತ್ತಾಸು, ಡಾಣಿ  ಹೀಗೆ ತರಹೆವಾರಿ ತಿನಿಸುಗಳು ನಮ್ ಉದರಕ್ಕ ಸೇರ್ತಿದ್ದವು. ಆ ಖುಷಿ ಮುಂದ,,,,ಈಗಿನ ಎಲ್ಲ ಖುಷಿ ಗೌಣ. ತಾತಾನ ಜೊತೆ ಸಂತಿಗೆ ಹೋದ್ರ ಸಿಗೋ ತಿನಿಸುಗಳೆ ಬೇರೆ. ಯಂಕ್ಯಾ, ಫೇಡ್ಯಾ ಬೇಕೆನ್ಲೆ ಅನ್ನುತ್ತ ನನ್ನ  ಉತ್ತರಕ್ಕೂ ಕಾಯದೇ ಎರಡೂ ಮುಷ್ಟಿ ತುಂಬ ಫೇಡ್ಯಾ ನೀಡಿದ ತಾತನ ಪ್ರೀತಿ ನೆನೆದರೇ ಹನಿಹಣ್ಣಾಗುತ್ತೇನೆ. ತಾತ ಎಷ್ಟೇ ಬಲವಂತ ಮಾಡಿದರೂ, ಅಪ್ಪಾರ ಅಪ್ಪಾರ ನಿಮ್ ಹತ್ರ ರೊಕ್ಕ ತಗೊಂಡ ನರಕಕ್ಕ ಹೋಗಂತಿರೇನು ಎನ್ನುವ ಹಳ್ಳಿಗರ ಮುಗ್ಧತೆ ಈಗೆಲ್ಲಿ. ಮುಂದೆ ತಂದೆ ಮುದಗಲ್ ರಾಘವೇಂದ್ರ ರಾವ್ ಅವರ ಜೊತೆ ನಾವೆಲ್ಲ ದೂರದ ಹೊಸನಗರಕ್ಕೆ ಹೋಗುವಾಗ, ಸಣ್ಣ ಮಗುವಿನ ಹಾಗೆ ಕಣ್ಣಿರಿಟ್ಟ ತಾತನ ಚಿತ್ರ ಇನ್ನೂ ಮಾಸಿಲ್ಲ.  ಬೇಸಿಗೆ ಮುನ್ನವೆ ಪತ್ರ ಬರೆದು ಬೇಸಿಗೆಗೆ ನಮ್ಮನೆಲ್ಲ ಕರೆಸಿಕೊಂಡು ಮನಸೋ ಇಚ್ಚಾ ನಮ್ಮ ಹೊಲದ ಚಂದ್ರ ಮಾವು ಹೋಳಿಗೆ ಮಾವಿನ ಸಿಕರಣೆ ತಿನ್ನಿಸಿ,,,,ಹೊರಡುವ ದಿನದಂದು ಮತ್ತದೆ ಕಣ್ಣಿರು,,,,ಅಮ್ಮನಿಗೆ ಸೀರಿ,,,,ನಮಗೆಲ್ಲಾ ಹೊಸ ಬಟ್ಟಿ,,,,ಜೇಬ್ ನ್ಯಾಗ ೫ ರೂಪಾಯಿ ಇರಿಸಿ ಬೀಳ್ಕೊಡುತ್ತಿದ್ದ ತಾತನ ಪ್ರೀತಿ   ಮುಂದ ಯಾವುದು ಸಾಟಿ ಇಲ್ಲ. ಒಂದ್ಸಾರಿ ಬ್ಯಾಸಗಿಗೆ ನಾವ್ ಹೋಗಿರ್ಲಿಲ್ಲ,,,,ಹುಬ್ಬಳ್ಳಿ, ಶಿರಸಿ, ಸಾಗರದ ಮೂಲಕ, ೪ ಬಸ್ ಗಳನ್ನು ಬದಲಾಯಿಸಿ ಹೊಸನಗರ ತಲುಪಿ ನಮ್ಮನೆಲ್ಲಾ ತಬ್ಬಿಕೊಂಡು ಪ್ರೀತಿಯ ಮಳೆಯೇ ಸುರಿಸಿದ್ದ. ನೆನೆಸಿಕೊಂಡರೆ,,,ಈಗಲೂ ಕಣ್ಣುಗಳು ಮಂಜಾಗುತ್ತವೆ. ಪ್ರೀತಿಯ ಮಳೆ ಸುರಿಸುವ ತಾತ, ಅಪ್ಪಾ ,ಅಮ್ಮ ಅವರೆಲ್ಲರನ್ನು  ಜಲ್ದೀನೆ ಕಳೆದುಕೊಂಡ ತಬ್ಬಲಿಗಳು ನಾವು.

ಡಂಗುರವ ಸಾರಿರಯ್ಯ

 'ಡಂಗುರವ ಸಾರಿರಯ್ಯ ಡಿಂಗರಿಗರೆಲ್ಲರು, ಭೂ-

ಮಂಡಲಕ್ಕೆ ಪಾಂಡುರಂಗವಿಟ್ಠಲ ಪರದೈವವೆಂದು' ಹೀಗೆ  ಪರವಶತೆಯ ಪರಾಕಾಷ್ಠೆಯಲ್ಲಿ ಭಜನೆ ಕಳೆಗಟ್ಟುತ್ತಿತ್ತು. ತಾಳ, ಖಂಜಿರ, ಡೊಲಕಗಳ ಲಯ ಬದ್ಧ ವಾದನ ಅಲೆ ಅಲೆಯಾಗಿ ಬಂದು ಕಿವಿಗೆ ಇಂಪಾಗಿ ಬಡಿಯುತ್ತಿತ್ತು. ಅಲ್ಲೊಬ್ಬರು ಭಜನೆಯ ತಾಳಕ್ಕನುಗುಣವಾಗಿ ತಕಧಿಮಿತ ಶುರುವಿಟ್ಟು ಕೊಂಡಿದ್ದರು. ಇಲ್ಲೊಂದು ಮಹಿಳಾ ಜೋಡಿ ಕೋಲಾಟ ಆರಂಭಿಸಿದ್ದರು. ಲಿಂಗ್ಸೂರಿನ ಶ್ರೀ ವರದೇಂದ್ರರ ಸನ್ನಿಧಾನ ಭಕ್ತಿಮಯವಾಗಿತ್ತು. ಈ ಯತಿಗಳು ಮಂತ್ರಾಲಯದ ಶ್ರೀ ರಾಘವೇಂದ್ರರ ಪೀಠಸ್ಥರು. ಮೂಲ ವೃಂದಾವನ ಪುಣೆಯಲ್ಲಿದ್ದು ಲಿಂಗ್ಸೂರಿನಲ್ಲಿರುವುದು ಸ್ವಪ್ನ ವೃಂದಾವನವಂತೆ. ನಮ್ಮ ಬಾಲ್ಯದಲ್ಲಿ, ವರದೇಂದ್ರರ ಆರಾಧನೆ, ಶ್ರೀ ಕುಪ್ಪೆರಾಯನ ಜಾತ್ರಿಗೆ ಹೋಗುದು ಅಘೋಷಿತ ನಿಯಮವಾಗಿತ್ತು. ನಮ್ತಾಯಿ ಸ್ವಾದರ್ಮಾವಾ ಹನುಮಣ್ಣ ಮತ್ತು ಶಾಂತಕ್ಕ ದಂಪತಿಗಳು ಬಂದವರನ್ನ ಗಂಡು ಬೀಗರಿಗೆ ಉಪಚರಿಸಿದ ಹಾಗೆ ನೋಡಿಕೊಳ್ಳ್ತಿದ್ರು. ನಾನು ಬಹಳ ಕರ್ಕಷ ಧ್ವನಿಯಲ್ಲಿ ಅಳುತ್ತಿದ್ದೆನಂತೆ. ಊರ ಮುಂದಿನ ಅಗಸಿ ಬಳಿಯ ನನ್ನ ಅಳು ಕೇಳಿಯೇ ಸೀತಕ್ಕ ಬಂದ್ಲು ಎಂದು ಗುರ್ತ ಹಿಡಿತ್ತಿದ್ದರಂತೆ. ಹತ್ತಿರದ, ದೂರದ ಬಳಗವೆಲ್ಲ ಅವರ ಮನೆಯಲ್ಲಿ ಬೀಡು ಬಿಡುತಿತ್ತು. ಸಾಕಷ್ಟು ಜನರ ಆಗಮನ ಖರ್ಚಿಗೆ ದಾರಿಯಾಗುತ್ತಿತ್ತು. ಮೂರ್ನಾಲ್ಕು ದಿನ ಎಲ್ಲರನ್ನು ನೋಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ, ಈ ದಂಪತಿಗಳು ಎಲ್ಲವನ್ನ ಲೀಲಾಜಾಲವಾಗಿ ನಿಭಾಯಿಸುತ್ತಿದ್ದರು. ಮೊದಲೆ ತುಂಬಿದ ಸಂಸಾರ ಜೊತೆಗೆ ನಮ್ಮೆಲ್ಲರನ್ನು ನೋಡಿ ಕೊಳ್ಳುವುವ ಜವಾಬ್ದಾರಿ ಮಮತಾಮಯೀ ಶಾಂತಕ್ಕದು. ಅವರಂತಹ ಅಃತಕರಣ ಭರಿತ ಜೀವ ಈಗಿನ ಕಾಲಘಟ್ಟದಲ್ಲಿ ಸಿಗುವುದು ದುರ್ಲಭ. ಅವರ ಹಿರಿಯ ಮಗ ಮದ್ದಪ್ಪ ಬೆಳಗ್ಗೆ ೭ ಕ್ಕೆ ಶುರು ಮಾಡಿದ್ರೆ ಎಲ್ಲರಿಗೆ ಚಹಾ ಮುಟ್ಟಿಸುವಲ್ಲಿ ೯ ಬಡಿಯುತ್ತಿತ್ತು. ಆಗ ಗ್ಯಾಸ ಸಹ ಇರ್ಲಿಲ್ಲ. ಚಿಮಣಿ ಎಣ್ಣಿ ಸ್ಟೋವ್ ನ್ನ ಹವಾ ಹೊಡ್ದು ಹೊಡ್ದು ಚಾಲು ಮಾಡ್ತಿದಿದ್ರು. ಯಥಾ ಪ್ರಕಾರ ನಮ್ಕಡಿಂದ ಅಪ್ಪ, ಅಮ್ಮಾ, ನಾವ್ ಐದ್ ಮಂದಿ ಮಕ್ಳು ಹಾಗೂ ನಮ್ ಮುತ್ಯಾ(ತಾತಾ)ಹಾಜರ. ಆರಾಧನೆಯ ಹಿಂದಿನ ದಿನದ ಪಲ್ಲಕ್ಕಿ ಸೇವೆ, ತಾರತಮ್ಯ ಭಜನೆ ತಡ ರಾತ್ರಿಯವರೆಗೂ ಸಾಗುತ್ತಿತ್ತು. ನನ್ನಮ್ಮ, ನನ್ನ  ನಿದ್ದೆ ಭರಿತ ಕಣ್ಣು ನೋಡಿ ತನ್ನ ಮಡಿಲಲ್ಲಿ  ಮಲಗಲು ಅನುವುಮಾಡಿ ಕೊಡುತ್ತಿದ್ದಳು(ಇದನ್ನು ಲೆಕ್ಕಣಿಸುವಾಗ ಕಂಗಳು ಮಂಜಾಗಿವೆ). ಆಕೆಯ ನಡು ಹಿಡಿದುಕೊಂಡೆ ಅರ್ಧ ನಿದ್ರೆ, ಅರ್ಧ ಸುಪ್ತಾವಸ್ಥೆಯಲ್ಲಿಯೇ ಗೂಡು ಸೇರಿ ನಿದ್ದೆಗೆ ಶರಣಾಗುತ್ತಿದ್ದೆ. ನಮ್ಮನ್ನು ಬಿಟ್ಟು ಅಪ್ಪಾ ಹೊರಟು ಬಿಡುತ್ತಿದ್ದರು. ಮತ್ತೆ ಕರೆಯಲು ಬರುತ್ತಿದ್ದರು.  ಸೀತಿ ಮಕ್ಳು ಬಲು ಉಲಕೋಚಿ ಎಂಬ ವಿಶೇಷಣ ನಮಗಿತ್ತು. ಅಮ್ಮನದ್ದು ಎಲ್ಲದಕ್ಕೂ ಮುಗುಳು ನಗೆಯ ಪ್ರತಿಕ್ರಿಯೆ. ಮಾರನೆ ದಿನ ಮಧ್ಯಾರಾಧನೆ. ಭಜನೆ, ತೇರಿನ ನಂತರ ಅಲಂಕಾರ ಕ್ಕೆ ಕೂತ ಆಚಾರ್ಯ ರ ಭೋಜನ. ಸುಮಾರು ಐವರು ಆಚಾರ್ಯರು ಅಲಂಕಾರ ದ ಭೋಜನಕ್ಕೆ ಕುಳಿತಿರುತ್ತಿದ್ದರು. ಅದು ತುಂಬಾ ಖರ್ಚಿನ ಬಾಬತ್ತು. ಪಂಚ ಭಕ್ಷ್ಯ ಪರಮಾನ್ನಗಳೆ ಅಲ್ಲಿರುತ್ತಿತ್ತು. ನನಗೆ ಪ್ರೀಯವಾದ ಬೆಸನ್ ಉಂಡಿ ಆಚಾರ್ಯ ರ ಉದರಕ್ಕಿಳಿಯುವುದನ್ನು ಆಸೆ ಕಣ್ಣುಗಳಿಂದ ನೋಡುತ್ತಿದ್ದೆ. ದೊಡ್ಡವನಾದ ಮೇಲೆ‌ ಅಲಂಕಾರ ಬ್ರಾಹ್ಮಣನಾಗುತ್ತೇನೆ ಎಂದು ಹೇಳಿ ಅಮ್ಮನಿಂದ ಧಡ್ಢ ಅಂದ್ರ ನೀನ,,,,,ಅಂತಾ ಬೈಸಿಕೊಂಡಿದ್ದೆ. ಅಲಂಕಾರದ ಖರ್ಚನ್ನು ಪ್ರತಿ ವರ್ಷ ಒಂದು ಜೋಡಿ ವಹಿಸಿಕೊಳ್ಳುವುದಾಗಿ ಮೊದಲೇ ತಿಳಿಸಿರುತ್ತಿತ್ತು. ಸಾಮೂಹಿಕ ಅನ್ನದ ಖರ್ಚನ್ನು ಪಟ್ಟಿ ಎತ್ತಿ ನಿರ್ವಹಿಸುತ್ತಿದ್ದರು. ಶ್ರೀ ಕುಪ್ಪೆರಾಯರ ಜಾತ್ರಿಯೊಳಗ ಮತ್ತssss ಎಲ್ಲರ ಜಮಾವಣಿ. ನಮ್ಮ ಮುತ್ಯಾ ತೇರ್ನಾಗ ಕೂತ ನಂತರ ತೇರ ಏಳಿತ್ತಿದ್ರು. ಉತ್ತತ್ತಿ, ಬಾಳಿ ಹಣ್ಣು ಗಳನ್ನ ನೆರೆದರು ಒಗಿತಿದ್ರು. ಅವನ್ನ ಹೀಡಿಯೋದ ಒಂದ ಖುಷಿ. ಈಗ, ಕಾಲ ಬದಲಾಗಿದೆ. ಎಲ್ಲಾ ಆಧುನೀಕರಣದ ಅಲೆಯಲ್ಲಿ ಕರಗ್ತಾ ಇದೆ. ಅಃತಕರಣದ ಜೀವಗಳು ಶ್ರೀ ಹರಿಯ ಪಾದ ಸೇರಿವೆ. ನನ್ತಮ್ಮ ಪ್ರಾಣೇಶ ಇಂದಿಗೂ ತಪ್ದೆ ಆರಾಧನೆ, ಜಾತ್ರಿಗೆ ಹೋಗ್ತಾನೆ. ಒಬ್ಬನಾದ್ರು ಆ ಕಕ್ಕಲುತೆಯ ಬಂಧ ಉಳ್ಸಿಕೊಂಡಿದ್ದಾನಲ್ಲ,,,,,ಅದೆ ಸಮಾಧಾನ ನನಗೆ.

Saturday, November 14, 2020

In The hindu


 

In The Hindu,,,,


 

ಪ್ರಜಾವಾಣಿಯಲ್ಲಿ,,,,,


 

In The Hindu issue dated 2/3/2020


 

In The Hindu issue dated 9/3/2020


 

In the Hindu,,,,,


 

ಪ್ರಜಾವಾಣಿ ದಿನ ಪತ್ರಿಕೆಯಲ್ಲಿ,,,,,,


 

ದಿನಾಂಕ ೨೩/೭/೨೦೨೦ರ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚಿತ್ರ-ಬರಹ


 

೩/೮/೨೦೨ರ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ನನ್ನ ಓಲೆ


 

೨೪/೯/೨೦೨೦ರ ವಿಜಯವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಪತ್ರ