Sunday, November 22, 2020

ಯಾತರ ಚೆಲುವಾನೇ,,,,,,,

ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮದುವೆಯ ಹಿಂದಿನ ರಾತ್ರಿಯ ಕಾರ್ಯಕ್ರಮಗಳು ಬಲು ಸೊಗಸು. ಅದರಲ್ಲೂ ಬ್ರಾಹ್ಮಣರಲ್ಲಂತೂ ಕಳೆ  ಜಾಸ್ತಿಯೇ ಕಟ್ಟಿರುತ್ತದೆ. ಬೀಗರನ್ನು ಎದಿರಿಗೊಳ್ಳುವುದು, ವರ ಪೂಜೆ, ವಾಗ್ ನಿಶ್ಚಯ ಇತ್ಯಾದಿಗಳನ್ನೊಳಗೊಂಡ ಪ್ರಕ್ರೀಯೆ ಭೂಮದ  ಊಟದೊಂದಿಗೆ ಸಮಾಪ್ತಿಯಾಗುತ್ತದೆ. ಊಟದ ಸಮಯದಲ್ಲಿ ಉಭಯ ಪಕ್ಷದವರು   ವ್ಯಂಗಭರಿತ ಹಾಡುಗಳನ್ನು ಹಾಡುತ್ತಾ  ವಾತಾವರಣ ರಂಗೇರುವಂತೆ ಮಾಡುತ್ತಾರೆ. 'ಮಂಡಿಗೆ' ಇರದಿದ್ದಲ್ಲಿ ಜಗಳ ಶುರುವಾಗುತ್ತದೆ. ನಾನು ಹೇಳ ಹೊರಟಿರುವುದು ಹಾಡಿನಿಂದಾಗಿ ಹುಟ್ಟಿದ ಜಗಳದ ಪ್ರಸಂಗ. ಸುಮಾರು 40ವರ್ಷಗಳ ಹಿಂದೆ ಹುಲಿಹೈದರನ  ನಮ್ಮ  ದೊಡ್ಡಮ್ಮನ ಬಳಿ  ಹೋಗಿದ್ದೆ. ಅಲ್ಲೊಂದು ಮದುವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿತ್ತು. ಭೂಮದ ಊಟದ ಆರಂಭದವರಗೆ ಎಲ್ಲಾ ಪ್ರಕ್ರೀಯೆ ಸಸೂತ್ರವಾಗಿ ಸಂಪನ್ನಗೊಂಡಿದ್ದವು. ಎಲ್ಲೆಲ್ಲೂ ಖುಷಿ ತುಂಬಿತ್ತು. ಊಟ ಆರಂಭವಾಯಿತು.ವರ ಮಹಾಶಯ ಕಪ್ಪಗಿದ್ದ. ಕನ್ಯಾ ಪಕ್ಷದ ಒಬ್ಬ ದಾಸಯ್ಯ ' ಕಪ್ಪು ರನ್ನೆ ಕರಿಯ ಮುಖದವ ಯಾತರ ಚೆಲುವನೆ' ಎಂದು ವರನ ಕಡೆ ಕೈ ತೋರುತ್ತ ಜೋರಾಗಿ ಹಾಡತೊಡಗಿದ.  ಇದು ಬೀಗಿತ್ತಿಯನ್ನ ಕೆರಳಿಸಿತು. 'ಎನ್ ಛಂದ ಹಾಡ್ಲಕತ್ತಿ ಸಾಕ ಮಾಡಪ್ಪ' ಅಂತಾ ಸಿಟ್ಟಿನಿಂದ ಹೇಳಿಯೇ ಬಿಟ್ಟರು. ಆದರೆ, ದಾಸಯ್ಯ ಕೇಳಬೇಕಲ್ಲ, ನಾನು ಕೃಷ್ಣನ ಬಗ್ಗೆ ಹಾಡ್ತಾ ಇದ್ದೇನೆ ನಿಮಗೇನು ತೊಂದರೆ' ಅಂತಾ ಹೇಳಿ ಇನ್ನೂ ತಾರಕ ಸ್ವರದಲ್ಲಿ ಮುಂದುವರೆಸಿದ. ಬೀಗಿತ್ತಿ ಕೆರಳಿದ ಸಿಂಹಿಣಿಯಾದರು. ವರ ಮಹಾಶಯನಿಗೆ ' ಎದರ ಇರೋ ಮಂಡಿಗಿ ಕಂಡಿದ್ಯಾ ಇಲ್ಲ,,,,ದಾಸಯ್ಯನ ಹಾಡು ನಿನ್ನ ಕಿವ್ಯಾಗ ಇಳಿದಿಲ್ಲೇನು' ಅನ್ನುತ್ತಾ ಎಬ್ಬಿಸಿಯೇ ಬಿಟ್ಟರು. ಪರಿಸ್ಥೀತಿ ಕೈ ಮೀರುತ್ತಿರುವುದನ್ನು ಅರಿತ  ಕನ್ಯಾಮಣಿಯ  ತಂದೆ, ತಾಯಿ ಕ್ಷಮೆ ಯಾಚಿಸುವುದರೊಂದಿಗೆ ಪ್ರಕರಣ ಸುಖಾಂತ್ಯವಾಯಿತು. ಈ ಘಟನೆ ಆಗಾಗ ನನ್ನ ಸೃತಿ ಪಟಲದಲ್ಲಿ ಹಾದು ಹೋಗುತ್ತಿರುತ್ತದೆ.

No comments:

Post a Comment