ಸೌಹಾರ್ದತೆಗೆ ಮುದಗಲಣ್ಣ
ಪ್ರೊ.ಬಸವರಾಜ ಸಬರದ್ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಅದ್ಭುತವಾದ ಗೀತೆಯೊಂದನ್ನ ರಚಿಸಿ ಕೊಟ್ಟಿದ್ದಾರೆ. ಈ ಗೀತೆಯನ್ನ ವಿಶ್ವವಿದ್ಯಾಲಯದ ಗೀತೆಯನ್ನಾಗಿ ನಾಡಗೀತೆಯ ನಂತರ ಹಾಡಲಾಗುತ್ತದೆ. ' ಜ್ಯೋತಿ ಬೆಳಗುತಿದೆ ಜ್ಞಾನದ ಜ್ಯೋತಿ ಬೆಳಗುತಿದೆ' ಎಂದು ಆರಂಭಗೊಳ್ಳುವ ಗೀತೆಯಲ್ಲಿ ಸಮಗ್ರ ಹೈದ್ರಾಬಾದ್ ಕರ್ನಾಟಕ ಕಾಣ ಸಿಗುತ್ತದೆ. ಅದರಲ್ಲೊಂದು ಸಾಲು 'ಸೌಹಾರ್ದತೆಗೆ ಮುದಗಲಣ್ಣ' ಎಂದಿದೆ. ನಾನೀಗ ಹೇಳ ಹೊರಟಿರುವುದು ನನ್ನೂರ ಸೌಹಾರ್ದತೆಯ ಕುರಿತು. ನಮ್ಮೂರನ ಮೊಹರಂ ಆಚರಣೆ ಅದ್ಭುತ. ಇಲ್ಲಿ ಮುಸ್ಲಿಂ-ಹಿಂದು ಬಾಂಧವರು ಸರಿ ಸಮನಾಗಿ ಪೈಪೋಟಿಗೆ ಬಿದ್ದವರಂತೆ ಮೊಹರಂ ಆಚರಿಸುತ್ತಾರೆ. ನಮ್ಮನಿ ಮೌಲಾಲಿ ದರ್ಗಾದ ಬಳಿಯೆ ಇದ್ದ ಕಾರಣ, ಈ ದೇವರ ಭೇಟಿಗೆ ಇತರೆ ದೇವರುಗಳು ಬರ್ತಾ ಇದ್ದುದನ್ನ ಬೆರಗಗಣ್ಣಿನಿಂದ ನೋಡ್ತಾ ಇದ್ದೇವು. ಕಿಲ್ಲೆದೊಳಗಿನ ಹುಸೇನ್ ಪಾಷಾ ದೇವರು ಮಾತ್ರ ಭೇಟಿಗೆ ಬರಾಂಗಿಲ್ಲ.ಅದೇನೊ ಕಥೆ ಇದೆಯಂತೆ. ಈ ದೇವರಿಗೆ ದಿರಿಸು ದೂರದ ಕಲ್ಯಾಣ ದಿಂದ ಬರ್ತದ. ಹಲಗಿ ಬಡಿತದ ಲಯದೊಂದಿಗೆ ಹುಲಿ ವೇಷಧಾರಿಯ ನೃತ್ಯ, ಕೆಂಡ ಹಾಯುವುದು, ಛತ್ರಿ ಹಿಡಿದುಕೊಂಡು ಕೋಲಾಟದ ಗೆಜ್ಜೆ ಕುಣಿತ ನೋಡುವುದರ ಸೊಗಸೇ ಬೇರೆ. ಎಲ್ಲ ದೇವರುಗಳಿಗೆ ಕೆಂಪು ಸಕ್ರಿ ಅರ್ಪಿಸುವುದನ್ನ ಎಲ್ಲರೂ ಶ್ರದ್ಧೆಯಿಂದ ಮಾಡುತ್ತಾರೆ. ಈ ದಿನಗಳಲ್ಲಿ ಮನೆಗಳಲ್ಲಿ ತಯಾರಿಸಲಾಗುವ ಮಾಲ್ದಿ(ಚಪಾತಿಯನ್ನು ಒಂದು ಹದಕ್ಕೆ ಕುಟ್ಟಿ ಪುಡಿ ಮಾಡಿ, ಸಕ್ಕರೆ, ಪುಟಾಣಿ ಸೋಪು ಸೇರಿಸಿ ಮಾಲಾಗುವ ಸಿಹಿ ತಿಂಡಿ)ಇಂಡಿಗೆ ನಾವೆಲ್ಲಾ ಫೀದಾ ಅಷ್ಟೇ. ಮೊಹರಂ ಕೊನೆಯ ದಿನದಂದು, ಕಿಕ್ಕಿರಿದ ಜನರ ಸಮ್ಮುಖದಲ್ಲಿ ದೇವರುಗಳ ಭೇಟಿ, ಆಗ ಹಾರಿಸಲಾಗುವ ತುಪಾಕಿಗಳ ಶಬ್ದಕ್ಕೆ ಕಿವಿ ತಮಟೆ ಹರಿದು ಹೋದಂತೆ ಭಾಸವಾಗುತ್ತದೆ. ಈ ಎಲ್ಲಾ ದೇವರುಗಳು ಅಪ್ಪಿಕೊಳ್ಳುವ ದೃಶ್ಯ ಕಣ್ಣಲ್ಲಿ ನೀರು ತರಿಸುತ್ತದೆ. ಅಷ್ಟೇತ್ತರ ದೇವರುಗಳನ್ನು ಟೊಂಕಕ್ಕೆ ಸಿಕ್ಕಿಸಿಕೊಂಡು ಸಮತೋಲನ ಕಾಪಾಡುವುದು ನಿಜಕ್ಕೂ ಶ್ರದ್ಧೆಯ ಫಲಶೃತಿ. ಮೇಲಿನ ಪೇಟೆಯ ಹಸನ್ ಪಾಷಾ ದೇವರು ಕಿಲೆದೊಳಗೆ ಹೋಗಲು ಪ್ರಯತ್ನಿಸುತ್ತಾರೆ.ಅವರು ಪ್ರವೇಶಿಸಿದರೆ ಪ್ರಳಯ ಎಂದು ಪ್ರತೀತಿ ಇದೆ. ಅವರನ್ನು ತಡೆಯುವುದರೊಂದಿಗೆ ಎಲ್ಲ ದೇವರರುಗಳು ಹಳೆ ಪೇಟೆಯೆಡೆ ಮೆರವಣಿಗೆಯಲ್ಲಿ ಲಯಬದ್ಧ ನಗಾರಿಯ ವಾದನ ದೊಂದಿಗೆ ತೆರಳುವ ದೃಶ್ಯ ನಯನ ಮನೋಹರ. ಮೊಹರಮ್ ಸಮಯದ ಜಾತ್ರೆಯ ವಾತಾವರಣ, ಬೆಂಡು, ಬತ್ತಾಸು, ಹತ್ತಿಕಾಯಿ, ಡಾಣಿ, ಲಡ್ಡು, ಜಿಲೇಬಿ ತಿಂದದ್ದೆ ತಿಂದದ್ದು. ಅಪ್ಪಾ, ಅಮ್ಮಾ ತಾತಾ ಅವರುಗಳ ಜೇಬಿಗೆ ಕತ್ತರಿ. ಹೆಂಗಳೆಯರಿಗೆ ಬಗೆ ಬಗೆಯ ಬಳೆ ಅಂಗಡಿಗಳು ಕೈ ಬೀಸಿ ಕರೆಯುತ್ತಿರುತ್ತವೆ. ಮುದಗಲ್ ಮೊಹರಮ್ ಕುರಿತು ಬೆಂಗಳೂರು ದೂರದರ್ಶನ ಶೂಟ ಮಾಡಿ ಪ್ರಸಾರ ಮಾಡಿದರೆ ರಾಜ್ಯದ ಎಲ್ಲರು ನೋಡಿದಂತಾಗುತ್ತದೆ ಒಟ್ಟಿನಲ್ಲಿ, ಒಮ್ಮೆ ನೋಡಲೇ ಬೇಕು ನಮ್ಮೂರ ಮೊಹರಮ್.
No comments:
Post a Comment